ಸಾರ್ಕ್ ಶೃಂಗ ಸಭೆಗೆ ಪ್ರಧಾನಿ ಮೋದಿಗೆ ಪಾಕ್ ಆಹ್ವಾನ

Public TV
1 Min Read

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ನಡೆಯುವ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಸ್ಥೆ(ಸಾರ್ಕ್)ಯ 19ನೇ ಶೃಂಗ ಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಆಹ್ವಾನಿಸುವುದಾಗಿ ಪಾಕಿಸ್ತಾನ ಹೇಳಿದೆ.

ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಾಕ್ ವಿದೇಶಾಂಗ ವಕ್ತಾರ ಡಾ. ಮೊಹಮ್ಮದ್ ಫೈಸಲ್, ಸಾರ್ಕ್ ಶೃಂಗಸಭೆಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲಾಗುವುದು. ಅಲ್ಲದೇ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಮೊದಲ ಭಾಷಣದಲ್ಲಿ ಭಾರತ ಮತ್ತು ಪಾಕಿಸ್ತಾನದ ದ್ವಿಪಕ್ಷೀಯ ಮಾತುಕತೆಯ ವಿಚಾರದಲ್ಲಿ ಭಾರತ ಒಂದು ಹೆಜ್ಜೆ ಮುಂದಿಟ್ಟರೆ, ಪಾಕ್ ಎರಡು ಹೆಜ್ಜೆ ಮುಂದಿಡುತ್ತದೆ ಎನ್ನುವ ವಿಚಾರವನ್ನೂ ಸಹ ಪ್ರಸ್ತಾಪಿಸಿದರು.

ಸಾರ್ಕ್ ಶೃಂಗ ಸಭೆ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತವೆ. 2014ರಲ್ಲಿ ನೇಪಾಳದ ಕಾಠ್ಮಂಡುವಿನಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ಮೋದಿಯವರು ಪಾಲ್ಗೊಂಡಿದ್ದರು. ಆದರೆ 2016ರಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ನಡೆಯಬೇಕಿದ್ದ ಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿರಲಿಲ್ಲ. ಏಕೆಂದರೆ 2016ರ ಸೆಪ್ಟೆಂಬರ್ 18 ರಂದು ಪಾಕ್ ಉಗ್ರಗಾಮಿಗಳು ಜಮ್ಮು ಕಾಶ್ಮೀರದ ಉರಿ ಪ್ರದೇಶದಲ್ಲಿನ ಭಾರತೀಯ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ, 19 ಯೋಧರನ್ನು ಬಲಿ ಪಡೆದುಕೊಂಡಿದ್ದರು. ಹೀಗಾಗಿ ದಾಳಿಯನ್ನು ಖಂಡಿಸಿ ಭಾರತ ಶೃಂಗ ಸಭೆಯಲ್ಲಿ ಪಾಲ್ಗೊಳ್ಳುವುದು ಅಸಾಧ್ಯವೆಂದು ತಿಳಿಸಿತ್ತು.

ಉಗ್ರ ದಾಳಿಯಿಂದಾಗಿ ಭಾರತ ಶೃಂಗ ಸಭೆಗೆ ಹಿಂದೆ ಸರಿದ ಬೆನ್ನಲ್ಲೇ, ಸಾರ್ಕ್ ಸದಸ್ಯ ರಾಷ್ಟ್ರಗಳಾದ ಬಾಂಗ್ಲಾದೇಶ, ಭೂತಾನ್ ಹಾಗೂ ಅಪ್ಘಾನಿಸ್ತಾನ ದೇಶಗಳು ಕೂಡ ಸಭೆಗೆ ವಿರೋಧ ವ್ಯಕ್ತಪಡಿಸಿದ್ದವು. ಹೀಗಾಗಿ ಪಾಕಿಸ್ತಾನ ಅನಿವಾರ್ಯವಾಗಿ ಶೃಂಗಸಭೆಯನ್ನು ಮುಂದೂಡಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಪಾಕ್ ವಿದೇಶಾಂಗ ಇಲಾಖೆ, ಶೃಂಗಸಭೆಯನ್ನು ಮುಂದೂಡಿದ್ದರೂ ಭವಿಷ್ಯದಲ್ಲಿ ಮತ್ತೆ ಸಭೆಯ ಆತಿಥ್ಯವನ್ನು ನಾವೇ ವಹಿಸುತ್ತೇವೆ ಎಂದು ಹೇಳಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *