ಕುಲಭೂಷಣ್‌ ಜಾಧವ್‌ ಕಿಡ್ನ್ಯಾಪ್‌ಗೆ ಸಹಕರಿಸಿದ್ದ ಪಾಕ್‌ ‘ವಿದ್ವಾಂಸ’ ಗುಂಡೇಟಿಗೆ ಬಲಿ

By
1 Min Read

ಇಸ್ಲಾಮಾಬಾದ್: ಭಾರತ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಅಪಹರಣಕ್ಕೆ ಪಾಕಿಸ್ತಾನದ ಐಎಸ್‌ಐ ಪತ್ತೆದಾರಿ ಏಜೆನ್ಸಿಗೆ ಸಹಾಯ ಮಾಡಿದ್ದ ಪಾಕ್‌ ವಿದ್ವಾಂಸ, ಅಪರಿಚಿತ ವ್ಯಕ್ತಿಯ ಗುಂಡೇಟಿಗೆ ಬಲಿಯಾಗಿದ್ದಾನೆ.

ಶುಕ್ರವಾರ ರಾತ್ರಿ ರಿಸ್ಟಿವ್ ಬಲೂಚಿಸ್ತಾನ್ ಪ್ರದೇಶದಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ. ಕೊಲೆಯಾದ ಮುಫ್ತಿ ಶಾ ಮಿರ್, ಬಲೂಚಿಸ್ತಾನದ ಪ್ರಮುಖ ಧಾರ್ಮಿಕ ವಿದ್ವಾಂಸ.

ರಾತ್ರಿ ಪ್ರಾರ್ಥನೆಯ ನಂತರ ಟರ್ಬಾಟ್‌ನಲ್ಲಿ ಸ್ಥಳೀಯ ಮಸೀದಿ ಮಸೀದಿಯಿಂದ ಹೊರಬರುತ್ತಿದ್ದಂತೆ, ಬೈಕ್‌ನಲ್ಲಿ ಬಂದ ಬಂದೂಕುಧಾರಿಗಳು ಹಠಾತ್‌ ದಾಳಿ ನಡೆಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಮುಫ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ.

ಮಿರ್ ಮೂಲಭೂತವಾದಿ ಪಕ್ಷದ ಜಮಿಯಟ್ ಉಲೆಮಾ-ಇ-ಇಸ್ಲಾಂ (ಜುಐ) ಸದಸ್ಯನಾಗಿದ್ದ. ಶಸ್ತ್ರಾಸ್ತ್ರ ಮತ್ತು ಮಾನವ ಕಳ್ಳಸಾಗಣೆದಾರನಾಗಿ ಕೆಲಸ ಮಾಡಿದ್ದ. ಐಎಸ್ಐ ಜೊತೆ ನಂಟಿತ್ತು. ಆಗಾಗ್ಗೆ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳಿಗೆ ಭೇಟಿ ನೀಡುತ್ತಿದ್ದ. ಭಯೋತ್ಪಾದಕರು ಭಾರತೀಯ ಪ್ರಾಂತ್ಯಕ್ಕೆ ಒಳನುಸುಳಲು ಸಹಾಯ ಮಾಡುತ್ತಿದ್ದ ಎಂದು ವರದಿಗಳಾಗಿವೆ.

ಕಳೆದ ವಾರ ಬಲೂಚಿಸ್ತಾನದ ಮೂರನೇ ಅತಿದೊಡ್ಡ ನಗರವಾದ ಖುಜ್ದಾರ್‌ನಲ್ಲಿ ಮುಫ್ತಿ ಶಾ ಮಿರ್‌ ಪಕ್ಷದ ಇತರ ಇಬ್ಬರು ಸದಸ್ಯರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

Share This Article