ಕ್ಷಿಪಣಿ ಬಗ್ಗೆ ಭಾರತಕ್ಕೆ ಪ್ರತ್ಯುತ್ತರ ನೀಡೋ ಬದಲು ಪಾಕಿಸ್ತಾನ ಸಂಯಮ ಬಯಸುತ್ತೆ: ಇಮ್ರಾನ್ ಖಾನ್

Public TV
1 Min Read

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಬಿದ್ದ ಭಾರತದ ಕ್ಷಿಪಣಿ ಬಗ್ಗೆ ಪ್ರತ್ಯುತ್ತರ ನೀಡಬಹುದಿತ್ತು. ಆದರೆ ಪಾಕಿಸ್ತಾನವು ಸಂಯಮವನ್ನು ಅನುಸರಿಸುತ್ತದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದರು.

ಪಂಜಾಬ್‍ನ ಹಫೀಜಾಬಾದ್ ಜಿಲ್ಲೆಯಲ್ಲಿ ಜಂಟಿ ಪ್ರತಿಪಕ್ಷಗಳು ತಮ್ಮ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯದ ಹಿನ್ನೆಲೆಯಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಘಟನೆಯ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದರು. ಮಿಯಾನ್ ಚನ್ನುನಲ್ಲಿ ಭಾರತೀಯ ಕ್ಷಿಪಣಿ ಬಿದ್ದ ನಂತರ ನಾವು ಪ್ರತಿಕ್ರಿಯಿಸಬಹುದಿತ್ತು. ಆದರೆ ನಾವು ಸಂಯಮವನ್ನು ಅನುಸರಿಸುತ್ತೇವೆ ಎಂದರು.

ಪಾಕಿಸ್ತಾನವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ನಮ್ಮ ರಕ್ಷಣೆ ಮಾಡಿಕೊಳ್ಳುವುದರ ಜೊತೆಗೆ ದೇಶವನ್ನು ಬಲಿಷ್ಠಗೊಳಿಸಬೇಕಾಗಿದೆ ಎಂದು ಹೇಳಿದರು. ಇದನ್ನೂ ಓದಿ:  ಪಾಕಿಸ್ತಾನದಲ್ಲಿ ಬಿತ್ತು ಭಾರತದ ಕ್ಷಿಪಣಿ- ಭಾರತ ಹೇಳಿದ್ದೇನು?

ಮಾರ್ಚ್ 9ರಂದು ಭಾರತೀಯ ಸೂಪರ್ಸಾನಿಕ್ ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಯಾಗಿ, ಈ ಕ್ಷಿಪಣಿ ಪಾಕಿಸ್ತಾನಕ್ಕೆ ಬಂದು ಬಿದ್ದಿತ್ತು. ಭಾರತೀಯ ಸೂಪರ್ಸಾನಿಕ್ ಕ್ಷಿಪಣಿಯು ಸಿರ್ಸಾದಿಂದ ಉಡಾವಣೆಗೊಂಡು ಪಾಕಿಸ್ತಾನದ ಭೂಪ್ರದೇಶದ ಸುಮಾರು 124 ಕಿ.ಮೀ. ದೂರದಲ್ಲಿರುವ, ಖನೇವಾಲ್ ಜಿಲ್ಲೆಯ ಮಿಯಾನ್ ಚನ್ನು ಬಳಿ ಇಳಿದಿತ್ತು. ಆದರೆ ಯಾವುದೇ ಸಾವು ನೋವು ಆಗಿರಲಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: 2 ವರ್ಷಗಳ ಬಳಿಕ ಕಳೆಗಟ್ಟಲಿದೆ ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವ

ಇದಕ್ಕೂ ಮೊದಲು ಪ್ರತಿಕ್ರಿಯಿಸಿದ್ದ ಪಾಕಿಸ್ತಾನದ ವಿದೇಶಾಂಗ ಕಚೇರಿ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಬಂದಿಳಿದ ಕ್ಷಿಪಣಿಯ ಕುರಿತು ಭಾರತದ ಸರಳವಾದ ವಿವರಣೆ ನೀಡಿದೆ. ಇದರಿಂದ ನಾವು ತೃಪ್ತರಾಗಿಲ್ಲ. ಘಟನೆಯ ಸುತ್ತಲಿನ ಸತ್ಯಗಳನ್ನು ನಿಖರವಾಗಿ ಸ್ಥಾಪಿಸಲು ಜಂಟಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.

Share This Article
Leave a Comment

Leave a Reply

Your email address will not be published. Required fields are marked *