ಕ್ರಿಕೆಟ್ ಪ್ರಪಂಚಕ್ಕೆ ಗೊತ್ತಿರುವ ಇಮ್ರಾನ್ ಖಾನ್ ಇವರಲ್ಲ: ಗಂಗೂಲಿ ತಿರುಗೇಟು

Public TV
2 Min Read

ನವದೆಹಲಿ: ನ್ಯೂಯಾರ್ಕ್ ನಗರದಲ್ಲಿ ಇತ್ತೀಚೆಗೆ ನಡೆದ 47ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಯುದ್ಧೋನ್ಮಾದ ಭಾಷಣ ಮಾಡಿದ್ದರು. ಈ ವಿಚಾರವಾಗಿ ಇಮ್ರಾನ್ ಖಾನ್ ಅವರಿಗೆ ಭಾರತ ತಂಡದ ಕ್ರಿಕೆಟ್ ಆಟಗಾರರು ಛೀಮಾರಿ ಹಾಕುತ್ತಿದ್ದಾರೆ.

ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಅವರು, ಇಮ್ರಾನ್ ಖಾನ್ ಮಾಧ್ಯಮಗಳ ಜೊತೆಗೆ ಮಾತನಾಡಿದ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿ ಅವಮಾನಕ್ಕೊಳಗಾಗಿದ್ದ ಇಮ್ರಾನ್ ಖಾನ್, ತಮ್ಮನ್ನು ತಾವೇ ಅವಮಾನಿಸಿಕೊಳ್ಳಲು ಮತ್ತೆ ಕೆಲವು ದಾರಿಗಳನ್ನು ಹುಡುಕಿಕೊಳ್ಳುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.

ಸೆಹ್ವಾಗ್ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ಈ ವಿಡಿಯೋ ನೋಡಿ ನನಗೆ ಶಾಕ್ ಆಯ್ತು. ಇಡೀ ಪ್ರಪಂಚವೇ ಶಾಂತಿಯನ್ನು ಬಯಸುತ್ತಿದೆ. ಆದರೆ ಪಾಕಿಸ್ತಾನದ ಪ್ರಧಾನಿ ಹೀಗೆ ಮಾತನಾಡುವುದು ಸರಿಯಲ್ಲ. ಕ್ರಿಕೆಟ್ ಪ್ರಪಂಚಕ್ಕೆ ಗೊತ್ತಿರುವ ಇಮ್ರಾನ್ ಖಾನ್ ಇವರಲ್ಲ ಎಂದು ಹೇಳಿದ್ದಾರೆ.

ಪಾಕ್ ಪ್ರಧಾನಿ ಮಾತಿಗೆ ಹರ್ಭಜನ್ ಸಿಂಗ್, ಮೊಹಮ್ಮದ್ ಶಮಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಪಾಕಿಸ್ತಾನಕ್ಕೆ ಬೇಕಿರುವುದು ಅಭಿವೃದ್ಧಿ ಕುರಿತು ಮಾತನಾಡುವ ನಾಯಕ, ಯುದ್ಧವನ್ನ ಕುರಿತು ಮಾತನಾಡುವ ವ್ಯಕ್ತಿಯಲ್ಲ ಎಂದಿದ್ದಾರೆ.

ವಿಡಿಯೋದಲ್ಲಿ ಏನಿದೆ?:
ಇಮ್ರಾನ್ ಖಾನ್ ಅಮೆರಿಕದ ಮಾಧ್ಯಮಗಳ ಜೊತೆಗೆ ಮಾತನಾಡುವಾಗ, ಇಲ್ಲಿಗಿಂತ ಚೀನಾದಲ್ಲಿ ಉತ್ತಮವಾಗಿ ಅಭಿವೃದ್ಧಿಯಾಗಿದೆ ಎಂದು ಅಮೆರಿಕವನ್ನು ಅಣಕಿಸಿದ್ದರು. ಇದರಿಂದ ಕೋಪಗೊಂಡ ಟಿವಿ ನಿರೂಪಕ, ನೀವು ಪಾಕಿಸ್ತಾನದ ಪ್ರಧಾನಿಯಂತೆ ಮಾತನಾಡುತ್ತಿಲ್ಲ ಎಂದು ಲೇವಡಿ ಮಾಡಿದ್ದರು.

ಇಮ್ರಾನ್ ಖಾನ್ ಯುದ್ಧೋನ್ಮಾದ ಭಾಷಣದ ಬಗ್ಗೆ ಕಿಡಿಕಾರಿದ್ದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ, ಮಹಾತ್ಮ ಗಾಂಧೀಜಿ ತಮ್ಮ ಇಡೀ ಜೀವನವನ್ನು ಪ್ರೀತಿ, ಸಾಮರಸ್ಯ ಮತ್ತು ಶಾಂತಿಯ ಸಂದೇಶ ರವಾನಿಸಲು ಮುಡಿಪಿಟ್ಟರು. ಆದರೆ ಇಮ್ರಾನ್ ಖಾನ್ ಪ್ರಮುಖ ವೇದಿಕೆಯಲ್ಲೇ ಬೆದರಿಕೆ ಹಾಕಿ ದ್ವೇಷದ ಮಾತುಗಳನ್ನು ಆಡುತ್ತಾರೆ. ಪಾಕಿಸ್ತಾನಕ್ಕೆ ಅಭಿವೃದ್ಧಿ, ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಯ ಬಗ್ಗೆ ಮಾತನಾಡುವ ನಾಯಕ ಬೇಕೆ ಹೊರತು, ಯುದ್ಧ ಮತ್ತು ಭಯೋತ್ಪಾದನೆಯನ್ನು ಆಶ್ರಯಿಸುವಂತವರಲ್ಲ ಎಂದು ಟ್ವೀಟ್ ಮಾಡಿದ್ದರು.

ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಕೂಡ ಇಮ್ರಾನ್ ಖಾನ್ ಭಾಷಣದ ಬಗ್ಗೆ ಗುಡುಗಿದ್ದರು. ವಿಶ್ವಸಂಸ್ಥೆಯಲ್ಲಿ ಇಮ್ರಾನ್ ಖಾನ್ ಅವರ ಮಾತುಗಳು ಭಯೋತ್ಪಾದಕರಿಗೆ ಸ್ಫೂರ್ತಿ ನೀಡುವಂತಿತ್ತು. ಕ್ರಿಕೆಟಿಗ-ರಾಜಕಾರಣಿ, ಕ್ರೀಡಾಪಟುಗಳು ಉತ್ತಮ ನಡವಳಿಕೆ ಮತ್ತು ಪಾತ್ರದ ಶಕ್ತಿಯ ಮಾದರಿಗಳಾಗಿರಬೇಕು. ಸ್ವತಃ ಮಾಜಿ ಕ್ರಿಕೆಟಿಗನಾಗಿದ್ದ ಇಮ್ರಾನ್ ಖಾನ್ ಭಯೋತ್ಪಾದಕರಿಗೆ ಆದರ್ಶಪ್ರಾಯ ಎಂದು ತರಾಟೆಗೆ ತೆಗೆದುಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *