ಕಾಶ್ಮೀರಕ್ಕಾಗಿ ಏನು ಬೇಕಾದ್ರೂ ಮಾಡಲು ಸಿದ್ಧ – ಬಾಲ ಬಿಚ್ಚಿದ ಪಾಕ್

Public TV
2 Min Read

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನ ಮಂತ್ರಿ ಇಂದು ತಮ್ಮ ದೇಶವನ್ನು ಉದ್ದೇಶಿಸಿ ಮಾತನಾಡಿದ್ದು, ಕಾಶ್ಮೀರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧವಿದೆ ಎಂದು ತಮ್ಮ ಮೊಂಡುತನವನ್ನ ಪ್ರದರ್ಶಿಸಿದ್ದಾರೆ.

ಆರ್‍ಎಸ್‍ಎಸ್ ವಿಚಾರಧಾರೆಗಳಿಂದಾಗಿ ಕಾಶ್ಮೀರದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ಭಾರತ ಹಿಂದೇಟು ಹಾಕುತ್ತಿದೆ. ಭಾರತವನ್ನು ಹಿಂದೂಗಳ ರಾಷ್ಟ್ರವನ್ನಾಗಿ ಮಾಡಲು ಆರ್‍ಎಸ್‍ಎಸ್ ಪ್ರಯತ್ನಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಒಂದು ತಪ್ಪಿನಿಂದ ಕಾಶ್ಮೀರಿಗರಿಗೆ ಸ್ವಾತಂತ್ರ್ಯದ ದೊಡ್ಡ ಅವಕಾಶ ಲಭಿಸಿದೆ. ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ನಿರ್ಧಾರದಿಂದ ಈ ವಿಚಾರ ಅಂತರಾಷ್ಟ್ರೀಯ ವಿಷಯವಾಗಿ ಬದಲಾಗಿದೆ. ಪ್ರಪಂಚದ ಎಲ್ಲ ಮುಸ್ಲಿಂ ರಾಷ್ಟ್ರಗಳು ಬೆಳವಣಿಗೆಗಳನ್ನು ಗಮನಿಸುತ್ತೇವೆ ಎಂದರು.

ಕಾಶ್ಮೀರ ವಿಷಯ ಯುದ್ಧವಾಗಿ ಬದಲಾದರೆ, ಎರಡೂ ರಾಷ್ಟ್ರಗಳು ಪರಮಾಣು ಶಕ್ತಿಯನ್ನು ಹೊಂದಿವೆ. ಕಾಶ್ಮೀರಕ್ಕಾಗಿ ನಾವು ಯಾವ ಹಂತ ತಲುಪಲು ಸಿದ್ಧವಿದೆ. ಈ ಶುಕ್ರವಾರದಂದು ಪಾಕಿಸ್ತಾನದಾದ್ಯಂತ ಮಧ್ಯಾಹ್ನ 12ರಿಂದ 12.30ರವರೆಗೆ ಕಾಶ್ಮೀರದ ವಿಚಾರವನ್ನು ಜನರಿಗೆ ತಿಳಿಸುತ್ತೇವೆ ಎಂದು ಹೇಳಿದರು.

ಕಾಶ್ಮೀರಿಗರು ತೊಂದರೆಯಲ್ಲಿದ್ದು, ಅವರಿಗೆ ಬೆಂಬಲವಾಗಿ ನಾವು ನಿಲ್ಲಬೇಕಿದೆ. ನಾನು ಸ್ವತಃ ಕಾಶ್ಮೀರದ ರಾಜಧೂತನಾಗಿ ಜಗತ್ತಿನಾದ್ಯಂತ ಸಂಚರಿಸಿ ಈ ವಿಷಯದ ಬಗ್ಗೆ ಮಾತನಾಡುತ್ತೇನೆ. ಸೆಪ್ಟೆಂಬರ್ 27ರಂದು ಸಂಯುಕ್ತ ರಾಷ್ಟ್ರಗಳೊಂದಿಗೆ ಈ ವಿಷಯದ ಕುರಿತಾಗಿ ಚರ್ಚೆ ನಡೆಸುತ್ತೇನೆ. ಕಾಶ್ಮೀರದ ವಿಷಯ ಕುರಿತಾಗಿ ನಾವು ಮಾತನಾಡಲಿ ಸಿದ್ಧವಿದ್ದು, ಭಾರತ ಒಪ್ಪುತ್ತಿಲ್ಲ. ಪದೇ ಪದೇ ನಮ್ಮ ಮೇಲೆ ಆರೋಪಗಳನ್ನು ಮಾಡುತ್ತಾ ಬಂದಿದ್ದು, ನಮ್ಮನ್ನು ಬ್ಲ್ಯಾಕ್ ಲಿಸ್ಟ್ ಗೆ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಟ್ರಂಪ್‍ಗೆ ಸಂದೇಶ ರವಾನಿಸಿದ ಮೋದಿ:
ಫ್ರಾನ್ಸ್ ದೇಶದ ಬಿಯರಿಟ್ಜ್‍ನ ನಗರದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ಮೋದಿ ಜಮ್ಮು ಕಾಶ್ಮೀರದ ಸಮಸ್ಯೆ ದ್ವಿಪಕ್ಷೀಯವಾದದ್ದು, ಇದನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ನಮಗಾಗಿ ಇತರೆ ರಾಷ್ಟ್ರಗಳು ತೊಂದರೆ ಅನುಭವಿಸುವ ಅಗತ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ 1947ಕ್ಕೂ ಮೊದಲು ಒಂದಾಗಿತ್ತು. ಹೀಗಾಗಿ ನಮ್ಮ ಸ್ವಂತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನಾವು ಸಮರ್ಥರಾಗಿದ್ದೇವೆ. ಜಮ್ಮು ಕಾಶ್ಮೀರದ ವಿಚಾರವು ದ್ವಿಪಕ್ಷೀಯ ವಿಷಯವಾಗಿದೆ ಎಂದು ಒತ್ತಿ ಹೇಳುವ ಮೂಲಕ ಈ ಹಿಂದೆ ಎರಡು ಬಾರಿ ಜಮ್ಮು ಕಾಶ್ಮೀರದ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವ ಕುರಿತು ಹೇಳಿಕೆ ನೀಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *