ಕುರಾನ್‌ಗೆ ಅಪಮಾನ – ಠಾಣೆಗೆ ನುಗ್ಗಿ ಆರೋಪಿಯನ್ನ ಗುಂಡಿಕ್ಕಿ ಕೊಂದ ಉದ್ರಿಕ್ತ ಗುಂಪು!

By
2 Min Read

– ಆರೋಪಿ ಶವ ಎಳೆದಾಡಿ, ಮರಕ್ಕೆ ನೇತು ಹಾಕಿ ವಿಕೃತಿ

ಇಸ್ಲಾಮಾಬಾದ್‌: ಮುಸ್ಲಿಮರ (Muslims) ಪವಿತ್ರ ಗ್ರಂಥ ಕುರಾನ್‌ ಅನ್ನು ಅಪವಿತ್ರಗೊಳಿದ್ದಾರೆಂದು ಆರೋಪಿಸಿ ಉದ್ರಿಕ್ತರ ಗುಂಪೊಂದು ಠಾಣೆಯಲ್ಲೇ ವ್ಯಕ್ತಿಯೊಬ್ಬನನ್ನ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಪಾಕಿಸ್ತಾನದಲ್ಲಿ (Pakistan) ನಡೆದಿದೆ.

ಇಲ್ಲಿನ ಖೈಬರ್ ಪಖ್ತುಂಕ್ವಾದ (Khyber Pakhtunkhwa) ಸ್ವಾತ್‌ ತಾಲೂಕಿನಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ನಿಯೋಜಿಸಲಾಗಿದೆ. ಇದನ್ನೂ ಓದಿ: ವಿಜಯೇಂದ್ರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಲಿ, ನಾನು ರಾಜ್ಯಾಧ್ಯಕ್ಷ ಆಗ್ತೀನಿ: ಯತ್ನಾಳ್

ಪಾಕಿಸ್ತಾನದ ಪಂಜಾಬ್‌ನ ಸಿಯಾಲ್‌ಕೋಟ್ ಜಿಲ್ಲೆಯ ವ್ಯಕ್ತಿಯೊಬ್ಬ ತೆಹಸಿಲ್‌ನಲ್ಲಿ ಪವಿತ್ರ ಕುರಾನ್‌ (Quran) ಗ್ರಂಥದ ಕೆಲವು ಪುಟಗಳನ್ನು ಸುಟ್ಟು ಹಾಕಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿತ್ತು. ಆದ್ರೆ ಉದ್ರಿಕ್ತರ ಗುಂಪು ಠಾಣೆ ಮುಂದೆ ಜಮಾಯಿಸಿ ಆತನನ್ನು ತಮಗೆ ಒಪ್ಪಿಸುವಂತೆ ಪಟ್ಟು ಹಿಡಿದಿತ್ತು. ಒಪ್ಪಿಸಲು ಪೊಲೀಸರು ನಿರಾಕರಿಸಿದ ನಂತರ ಆರೋಪಿಯನ್ನ ಗುಂಡಿಕ್ಕಿ ಕೊಂದಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಜಹಿದುಲ್ಲಾ ತಿಳಿಸಿದ್ದಾರೆ.

ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?
ಕುರಾನ್‌ ಗ್ರಂಥವನ್ನು ಅವಹೇಳನ ಮಾಡಿದ್ದಕ್ಕೆ ಮತ್ತು ಕುರಾನ್‌ ಗ್ರಂಥದ ಕೆಲ ಪುಟಗಳನ್ನು ಸುಟ್ಟುಹಾಕಿದ ಆರೋಪದ ಮೇಲೆ ಸ್ವಾತ್‌ ತಾಲೂಕಿನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿ ಮಧ್ಯಾನ್‌ ಠಾಣೆಗೆ ಕರೆತಂದಿದ್ದರು. ಈ ಬೆನ್ನಲ್ಲೇ ಠಾಣೆ ಎದುರು ಜಮಾಯಿಸಿದ ನೂರಾರು ಜನರ ಉದ್ರಿಕ್ತರ ಗುಂಪು ಆರೋಪಿಯನ್ನು ತಮ್ಮ ಕೈಗೊಪ್ಪಿಸುವಂತೆ ಪಟ್ಟು ಹಿಡಿದಿದ್ದರು.

ಇದಕ್ಕೆ ಪೊಲೀಸರು ಒಪ್ಪದಿದ್ದ ನಂತರ ಜನರ ನಡುವೆ ಭಾರೀ ಘರ್ಷಣೆ ಉಂಟಾಗಿತ್ತು. ಬಳಿಕ ಉದ್ರಿಕ್ತರ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್‌ ನಡೆಸಿದರು. ಘಟನೆಯಲ್ಲಿ ಒಬ್ಬ ವ್ಯಕ್ತಿಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ತಕ್ಷಣ ಮಧ್ಯಾನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ದರ್ಶನ್‌ ಬಳಿ 70 ಲಕ್ಷ ರೂ. ಪತ್ತೆ – ʻದಾಸʼನಿಗೆ ಕೊಲೆ ಆರೋಪದ ಜೊತೆಗೆ ಐಟಿ ಸಂಕಷ್ಟ!

ಇದರಿಂದ ಮತ್ತಷ್ಟು ಉದ್ರಿಕ್ತಗೊಂಡ ಗುಂಪು ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿತ್ತು. ಬಳಿಕ ಕೆಲವರು ನೇರವಾಗಿ ಪೊಲೀಸ್‌ ಠಾಣೆಗೆ ನುಗ್ಗಿ ಆರೋಪಿಯನ್ನ ಗುಂಡಿಕ್ಕಿ ಕೊಂದು ಆತನ ಮೃತದೇಹವನ್ನು ಹೊರಗೆಳೆದು ಅದನ್ನು ಮರಕ್ಕೆ ನೇತು ಹಾಕಿ ವಿಕೃತಿ ಮೆರೆದಿದೆ. ಘಟನೆಯಲ್ಲಿ 8 ಮಂದಿಗೆ ಗಂಭೀರ ಗಾಯಗಳಾಗಿವೆ, ಕೆಲ ಪೊಲೀಸರೂ ಗಾಯಗೊಂಡಿದ್ದಾರೆ ಎಂದು ಜಹೀದುಲ್ಲಾ ಹೇಳಿದ್ದಾರೆ.

Share This Article