ಮೋದಿಯ ಪ್ರತೀಕಾರದ ಶಪಥಕ್ಕೆ ಬೆವರಿದ ಪಾಕ್ – ಭಾರತಕ್ಕೆ ಪರಮಾಣು ದಾಳಿಯ ಗೊಡ್ಡು ಬೆದರಿಕೆ

Public TV
2 Min Read

– ಭಾರತದಲ್ಲಿ ಪಾಕ್‌ ಮಾಜಿ ಪ್ರಧಾನಿ ಬಾಯಿಗೆ ಬೀಗ

ನವದೆಹಲಿ/ಇಸ್ಲಾಮಾಬಾದ್‌: ಪಹಲ್ಗಾಮ್ ದಾಳಿ (Pahalgam Terrorist Attack) ನಡೆದು ಎರಡು ವಾರ ಆಗ್ತಾ ಬಂತು. ಉಗ್ರರ ದಾಳಿಗೆ ಪಾಕ್ ವಿರುದ್ಧ ಭಾರತ (India) ಪ್ರತೀಕಾರದ ನಡೆ ಇಟ್ಟಿದೆ. ಉಗ್ರರ ದಾಳಿಯಲ್ಲಿ ತಮ್ಮ ಕೈವಾಡ ಇದ್ದರೂ ಪಾಕಿಸ್ತಾನ ಸಾಕ್ಷ್ಯ ಕೇಳುತ್ತಿದೆ.

ಪಹಲ್ಗಾಮ್ ದಾಳಿಗೂ ನಮಗೂ ಸಂಬಂಧವಿಲ್ಲ. ದಾಳಿಗೆ ಭಾರತ ಯಾವುದೇ ಆಧಾರ ನೀಡಿಲ್ಲ. ಪಾಕ್ ಪಾತ್ರದ ಆರೋಪ ನಿರಾಧಾರ ಅಂತ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಮತ್ತೆ ಉದ್ಧಟತನ ಮೆರೆದಿದ್ದಾರೆ. ರಷ್ಯಾದಲ್ಲಿನ ಪಾಕಿಸ್ತಾನದ ರಾಯಭಾರಿ ಮುಹಮ್ಮದ್ ಖಾಲಿದ್ ಜಮಾಲಿ, ಪಾಕ್ ಮೇಲೆ ದಾಳಿ ಮಾಡಿದ್ರೆ ಪರಮಾಣು ದಾಳಿ ಪ್ರಯೋಗ ಮಾಡಬೇಕಾಗುತ್ತೆ ಅಂತ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ.

ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್, ಸಿಂಧೂ ನದಿ ನೀರು ತಡೆಯಲು ಡ್ಯಾಂ ನಿರ್ಮಿಸಿದ್ರೆ ನಾಶಪಡಿಸ್ತಿವಿ ಅಂತ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಮತ್ತದೇ ಗೊಡ್ಡು ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನು ಪಾಕ್ ಸಂಸದ ಶೇರ್ ಅಫ್ಜಲ್ ಖಾನ್ ಮಾರ್ವತ್, ಭಾರತ ಯುದ್ಧ ಮಾಡಿದ್ರೆ ನಾನು ಇಂಗ್ಲೆಂಡ್‌ಗೆ ಪಲಾಯನ ಮಾಡ್ತೇನೆ ಎಂದಿದ್ದಾರೆ. ಪಾಕ್ ಪತ್ರಕರ್ತರು ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿರೋದು ಪಾಕಿಸ್ತಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನು ನಾಳೆ ಪಾಕಿಸ್ತಾನ ಸಂಸತ್‌ನ ವಿಶೇಷ ಅಧಿವೇಶನ ನಡೆಯಲಿದೆ.

ಇಮ್ರಾನ್‌ ಖಾನ್‌ ಬಾಯಿಗೆ ಬೀಗ:
ಉಗ್ರ ಬೆಂಬಲಿತ ಪಾಕಿಸ್ತಾನದ ವಿರುದ್ಧ ಭಾರತದ ಪ್ರತೀಕಾರದ ಕ್ರಮಗಳು ಹೆಚ್ಚಾಗ್ತಿವೆ. ಪಾಕ್ ವಿರುದ್ಧ ಭಾರತ ಡಿಜಿಟಲ್ ಸ್ಟ್ರೈಕ್‌ ಸಾರಿದೆ. ಭಾರತದ ಯುದ್ಧ ಭೀತಿ ಬಗ್ಗೆ ಪೋಸ್ಟ್ ಮಾಡಿದ್ದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಎಕ್ಸ್ ಖಾತೆಯನ್ನು ಭಾರತ ನಿರ್ಬಂಧಿಸಿದೆ. ಅಲ್ಲದೇ ಭಾರತದ ವಿರುದ್ಧ ರಕ್ತ ಕಾರಿದ್ದ ಪಾಕ್ ಮಾಜಿ ಸಚಿವ ಬಿಲಾವಲ್ ಭುಟ್ಟೋ ಎಕ್ಸ್ ಖಾತೆಯನ್ನೂ ಬ್ಲಾಕ್ ಮಾಡಲಾಗಿದೆ.

ಈ ನಡುವೆ ಪಾಕಿಸ್ತಾನದ ವಿರುದ್ಧ ಅನೇಕ ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಂಡಿದೆ. ಭಾರತದ ಬಂದರುಗಳು, ಹಡಗು ಸಾಗಣೆ, ಜಲಮಾರ್ಗಗಳ ಸಚಿವಾಲಯವು ಇಂದಿನಿಂದ ಪಾಕಿಸ್ತಾನ ಧ್ವಜ ಹೊಂದಿರುವ ಹಡಗುಗಳು ಭಾರತೀಯ ಬಂದರುಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಿದೆ. ಈ ಬೆನ್ನಲ್ಲೇ ಪಾಕಿಸ್ತಾನ ಕೂಡ ಭಾರತೀಯ ಧ್ವಜ ವಾಹಕ ನೌಕೆಗಳು ತನ್ನ ಬಂದರು ಬಳಸುವುದನ್ನು ನಿಷೇಧಿಸಿದೆ.

Share This Article