ಭಾರತೀಯ ವಿಮಾನಗಳಿಗೆ ನಿರ್ಬಂಧ – ಪಾಕಿಗೆ 1,240 ಕೋಟಿ ನಷ್ಟ

Public TV
1 Min Read

ಇಸ್ಲಾಮಾಬಾದ್:‌ ಭಾರತೀಯ ವಿಮಾನಗಳಿಗೆ (India Plane) ತನ್ನ ವಾಯುಸೀಮೆಯನ್ನು ಬಂದ್‌ ಮಾಡಿದ ಪರಿಣಾಮ ಪಾಕಿಸ್ತಾನ (Pakistan) ಭಾರೀ ಆರ್ಥಿಕ ನಷ್ಟ ಅನುಭವಿಸಿದೆ. ಪಾಕಿಸ್ತಾನ ವಿಮಾನ ನಿಲ್ದಾಣ ಪ್ರಾಧಿಕಾರ (PAA) ಕೇವಲ ಎರಡು ತಿಂಗಳಲ್ಲಿ 1,240 ಕೋಟಿ ಪಾಕಿಸ್ತಾನ ರೂ. ನಷ್ಟವನ್ನು ಅನುಭವಿಸಿದೆ ಎಂದು ದೇಶದ ರಕ್ಷಣಾ ಸಚಿವಾಲಯದ ಅಧಿಕೃತ ಹೇಳಿಕೆಯನ್ನು ಉಲ್ಲೇಖಿಸಿ ಡಾನ್ ವರದಿ ಮಾಡಿದೆ.

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ (Jammu Kashmir) ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದ ಭಾರತದ ಕ್ರಮಕ್ಕೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಮುಚ್ಚಿದೆ.  ಇದನ್ನೂ ಓದಿ: ಆಪರೇಷನ್‌ ಸಿಂಧೂರದಲ್ಲಿ ಭಾರತ ಪರಾಕ್ರಮ ಪಾಕ್‌ನ 6 ಯುದ್ಧ ವಿಮಾನಗಳು ಉಡೀಸ್‌; ವಾಯುಪಡೆ ಮುಖ್ಯಸ್ಥ

ಏಪ್ರಿಲ್ 24 ರಿಂದ ಜಾರಿಗೆ ಬಂದ ನಿಷೇಧದಿಂದಾಗಿ, ದೇಶವು ಹೆಚ್ಚುವರಿ ಆದಾಯದಲ್ಲಿ ಭಾರಿ ನಷ್ಟವನ್ನು ಅನುಭವಿಸಿದೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಮೊಹಮ್ಮದ್ ಆಸಿಫ್ ದೃಢಪಡಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರತಿ ದಿನ ಭಾರತದ ಸುಮಾರು 100-150 ವಿಮಾನಗಳು ಪಾಕ್‌ ವಾಯುಸೀಮೆಯನ್ನು ಬಳಕೆ ಮಾಡುತ್ತಿದ್ದವು. ನಿರ್ಬಂಧ ಹೇರಿದ ಪರಿಣಾಮ ಪಾಕಿಸ್ತಾನ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ 1,240 ಕೋಟಿ ರೂ. ನಷ್ಟವಾಗಿದೆ ಎಂದು ಸಂಸತ್ತಿಗೆ ರಕ್ಷಣಾ ಸಚಿವಾಲಯ ಮಾಹಿತಿ ನೀಡಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.

ಪಾಕ್‌ ನಿರ್ಧಾರಕ್ಕೆ ಪ್ರತಿಯಾಗಿ ಭಾರತವೂ ಪಾಕಿಸ್ತಾನದ ವಿಮಾನಗಳಿಗೆ ತನ್ನ ವಾಯುಸೀಮೆ ಬಳಕೆಗೆ ನಿರ್ಬಂಧ ಹೇರಿದೆ. ಪಾಕಿಸ್ತಾನ ವಾಯುಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ಹೊರತುಪಡಿಸಿ ಬೇರೆ ದೇಶಗಳ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡಲಾಗಿದೆ. ಇದೇ ರೀತಿಯಾಗಿ ಭಾರತೀಯ ವಾಯುಪ್ರದೇಶದಲ್ಲಿ ಪಾಕಿಸ್ತಾನ ವಿಮಾನಗಳಿಗೆ ಹೊರತುಪಡಿಸಿ ಉಳಿದೆಲ್ಲ ವಿಮಾನಗಳ ಹಾರಾಟಕ್ಕೆ ಅವಕಾಶವಿದೆ.

Share This Article