ಸಚಿನ್‍ರನ್ನ ದೂರಿ, ವಿಶೇಷ ಮನವಿ ಸಲ್ಲಿಸಿದ ಇಂಜಮಾಮ್-ಉಲ್-ಹಕ್

Public TV
2 Min Read

– ತೆಂಡೂಲ್ಕರ್ ಯುವಕರಿಗೆ ಆಟದ ಸೂಕ್ಷ್ಮ ವ್ಯತ್ಯಾಸಗಳನ್ನು ಕಲಿಸಲಿಲ್ಲ

ಇಸ್ಲಾಮಾಬಾದ್: ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಶ್ರೇಷ್ಠ ಬ್ಯಾಟ್ಸ್‌ಮನ್. ಅಷ್ಟೇ ಅಲ್ಲದೆ ಅಪಾಯಕಾರಿ ಬೌಲರ್ ಕೂಡ ಹೌದು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಹೇಳಿದ್ದಾರೆ.

ಇಂಜಮಾಮ್ ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಸಚಿನ್ ತೆಂಡೂಲ್ಕರ್ ಅವರ ಬಗ್ಗೆ ಪೂರ್ಣ ಸಂಚಿಕೆ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಚಿನ್ ಅವರನ್ನು ಹೊಗಳಿದ್ದಾರೆ. ಜೊತೆಗೆ ಸಚಿನ್ ಅವರು ಯುವಕರಿಗೆ ಆಟದ ಸೂಕ್ಷ್ಮ ವ್ಯತ್ಯಾಸಗಳನ್ನು ಕಲಿಸಲಿಲ್ಲ ಎಂದು ದೂರಿದ್ದಾರೆ.

ನಾನು ವಿಶ್ವದ ಎಲ್ಲಾ ಲೆಗ್ ಸ್ಪಿನ್ನರ್‌ಗಳನ್ನು ಎದುರಿಸಿದ್ದೇನೆ. ಯಾರೇ ಗೂಗ್ಲಿ ಎಸೆದರೂ ನನಗೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಸಚಿನ್ ಅವರ ಗೂಗ್ಲಿ ಎಸೆತಗಳನ್ನು ಎದುರಿಸುವಲ್ಲಿ ಪರದಾಡುತ್ತಿದ್ದೆ. ಇದೇ ಕಾರಣಕ್ಕೆ ಸಚಿನ್ ಅನೇಕ ಬಾರಿ ನನ್ನ ವಿಕೆಟ್ ಕಿತ್ತು, ಪೆವಿಲಿಯನ್‍ಗೆ ಅಟ್ಟಿದ್ದರು ಎಂದು ಇಂಜಮಾಮ್ ಹೇಳಿದ್ದಾರೆ.

ಅತ್ಯಂತ ಶ್ರೇಷ್ಠ ಪದವಿ ಇದ್ದರೆ, ಅದನ್ನು ಸಚಿನ್ ಅವರಿಗೆ ನೀಡಲು ಬಯಸುತ್ತೇನೆ. 16ನೇ ವಯಸ್ಸಿನಲ್ಲಿ ಅವರು ಇಮ್ರಾನ್ ಖಾನ್, ವಾಕರ್ ಯೂನಿಸ್ ಮತ್ತು ವಾಸಿಮ್ ಅಕ್ರಮ್ ಅವರಂತಹ ಬೌಲರ್‍ಗಳನ್ನು ಎದುರಿಸಿದ್ದರು. ಸಚಿನ್ ಚೊಚ್ಚಲ ಸರಣಿಯ ಪಂದ್ಯವೊಂದರಲ್ಲಿ ಪೇಶಾವರದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ಮುಷ್ತಾಕ್ ಅಹ್ಮದ್ ಅವರ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು. ನಂತರ ವಿಶ್ವದ ಶ್ರೇಷ್ಠ ಲೆಗ್ ಸ್ಪಿನ್ನರ್ ಗಳಲ್ಲಿ ಒಬ್ಬರಾದ ಅಬ್ದುಲ್ ಖಾದಿರ್ ಅವರನ್ನು ಎದುರಿಸಿದ್ದರು. ಪಂದ್ಯದ ವೇಳೆ ಖಾದಿರ್ ಅವರು, ಸಚಿನ್ ಅವರನ್ನು ಕೆಣಕಿದ್ದರು. ಆಗ ಪ್ರತ್ಯುತ್ತರವಾಗಿ ಸಚಿನ್ ಕದೀರ್ ಅವರು ಎಸೆದ ಓವರಿನಲ್ಲಿ ನಾಲ್ಕು ಸಿಕ್ಸರ್ ಸಿಡಿಸಿದ್ದರು ಎಂದು ಇಂಜಮಾಮ್ ನೆನೆದಿದ್ದಾರೆ.

ಸಚಿನ್ ಯುಗವನ್ನು ಬದಲಾಯಿಸಿದ್ರು:
‘ಯಾವುದೇ ಶ್ರೇಷ್ಠ ಬ್ಯಾಟ್ಸ್‍ಮನ್‍ಗಳು 8 ಸಾವಿರಕ್ಕೂ ಹೆಚ್ಚು ರನ್ ಗಳಿಸಲು ಸಾಧ್ಯವಾಗದ ಅವಧಿಯಲ್ಲಿ ಸಚಿನ್ ಆಡಿದ್ದರು. ಈ ವೇಳೆ ಭಾರತದ ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ಅವರು 10 ಸಾವಿರ ರನ್ ಗಳಿಸಿದ್ದರು. ಆದರೆ ಸಚಿನ್ ಅವರಿಂದ ಸ್ಫೂರ್ತಿ ಪಡೆದು 35 ಸಾವಿರ ರನ್ ಗಳಿಸಿದ್ದಾರೆ. ಅವರ ದಾಖಲೆಯನ್ನು ಯಾರು ಮುರಿಯುತ್ತಾರೆ ಎಂಬುದನ್ನು ಈಗ ನೋಡಬೇಕಿದೆ. ಜಗತ್ತಿನಲ್ಲಿ ಸಚಿನ್ ಅವಗಿರುವಷ್ಟು ಯಾವ ಕ್ರಿಕಟ್ ಆಟಗಾರರಿಗೂ ಅಭಿಮಾನಿಗಳಿಲ್ಲ. ಸಚಿನ್ ಬೌಲರ್ ಆಗಿರಲಿಲ್ಲ. ಆದರೆ ಅವರು ಮಧ್ಯಮ ವೇಗಿ ಹಾಗೂ ಲೆಗ್ ಸ್ಪಿನ್ನರ್ ಆಗಿ ಮಿಂಚಿದ್ದಾರೆ’ ಎಂದು ಹೇಳಿದರು.

ಕೊನೆಗೆ ಇಂಜಮಾಮ್ ಸಚಿನ್‍ಗೆ ಒಂದು ಸಂದೇಶ ನೀಡಿದರು. ‘ಈ ಮಹಾನ್ ಆಟಗಾರನಿಂದ ನನಗೆ ದೂರು ಇದೆ. ತಾವು ಹೊಂದಿದ್ದ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಯುವ ಆಟಗಾರರೊಂದಿಗೆ ಹಂಚಿಕೊಳ್ಳಲಿಲ್ಲ. ಅವರು ತಮ್ಮ ಅನುಭವವನ್ನು ಬೇರೆಯವರೊಂದಿಗೆ, ವಿಶೇಷವಾಗಿ ಯುವಕರೊಂದಿಗೆ ಹಂಚಿಕೊಳ್ಳದೆ ಕ್ರಿಕೆಟ್‍ನಿಂದ ದೂರವಿರುವುದು ಸರಿಯಲ್ಲ. ಸಚಿನ್ ಇದರ ಬಗ್ಗೆ ಯೋಚಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದು ಕೇಳಿಕೊಂಡಿದರು.

Share This Article
1 Comment

Leave a Reply

Your email address will not be published. Required fields are marked *