ಉಗ್ರರ ಗುಂಡಿನ ದಾಳಿಗೆ ಸೇನೆಯ ಅಧಿಕಾರಿ ಹುತಾತ್ಮ

Public TV
1 Min Read

ಶ್ರೀನಗರ: ಉಗ್ರರ ಗುಂಡಿನ ದಾಳಿಗೆ ಭಾರತೀಯ ಸೇನೆಯ ಜೂನಿಯರ್ ಕಮಿಷನ್ಡ್ ಆಫೀಸಟರ್(ಜೆಸಿಒ) ಹುತಾತ್ಮರಾಗಿದ್ದಾರೆ.

ಗಡಿ ನಿಯಂತ್ರಣ ರೇಖೆಯ ಅರ್ಧ ಕಿ.ಮೀ. ದೂರದಲ್ಲಿರುವ ನೌಶೇರಾ ಸೆಕ್ಟರ್‍ನಲ್ಲಿರುವ ಪೋಸ್ಟ್‍ನಲ್ಲಿ ಉಗ್ರರು ಜೆಸಿಒ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿ ನಡೆದ ಪ್ರದೇಶವನ್ನು ಭದ್ರತಾ ಪಡೆ ಸುತ್ತುವರಿದಿದ್ದು, ಕಾರ್ಯಾಚರಣೆ ನಡೆಯುತ್ತಿದೆ ಎಂದು ಎಎನ್‍ಐ ವರದಿ ಮಾಡಿದೆ.

ನಿನ್ನೆಯಷ್ಟೆ ಕಾಶ್ಮೀರದ ಅವಂತಿಪೋರಾ ಪ್ರದೇಶದಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಪಡೆದ ನಂತರ ಭದ್ರತಾ ಪಡೆ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.

ಭಾನುವಾರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ಫಿರಂಗಿ ದಾಳಿ ನಡೆಸಿ ನಾಲ್ಕು ಭಯೋತ್ಪಾದಕ ಶಿಬಿರಗಳನ್ನು ಹಾಗೂ ಪಾಕಿಸ್ತಾನ ಸೇನೆಯ ಸ್ಥಾನಗಳನ್ನು ಧ್ವಂಸಗೊಳಿಸಿತ್ತು. ಈ ಘಟನೆ ನಡೆದ ನಂತರ ಕಾಶ್ಮೀರದಲ್ಲಿ ನಡೆದ ಮೊದಲ ಗುಂಡಿನ ಚಕಮಕಿ ಇದಾಗಿದೆ. ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ್ದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಫಿರಂಗಿ ದಾಳಿ ನಡೆಸಿತ್ತು.

ಅಕ್ಟೋಬರ್ 20ರಂದು ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದ ನೀಲಂ ಕಣಿವೆಯಲ್ಲಿ ನಾಲ್ಕು ಭಯೋತ್ಪಾದಕರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿತ್ತು. ಇದರಿಂದಾಗಿ ಸಾವು-ನೋವು ಹಾಗೂ ಅಪಾರ ಹಾನಿ ಸಂಭವಿಸಿತ್ತು.

ಭಾರತೀಯ ಸೇನೆ ಉಗ್ರರ ಶಿಬಿರಗಳನ್ನು ಗುರಿಯಾಗಿಸಿಕೊಂಡು ಫಿರಂಗಿ ಬಳಸಿ ದಾಳಿ ನಡೆಸಿತ್ತು. ಸೇನೆ ನಡೆಸಿದ ದಾಳಿಯಿಂದಾಗಿ ಪಿಒಕೆಯಲ್ಲಿ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ. ಸೇನೆಯು ಭಾರೀ ಶಸ್ತ್ರಾಸ್ತ್ರಗಳನ್ನು ಬಳಸಿತ್ತು.

ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ತಂಗ್ಧರ್ ಸೆಕ್ಟರ್ ನಲ್ಲಿ ಭಾನುವಾರ ಪಾಕಿಸ್ತಾನ ಸೇನೆ ಕದನವಿರಾಮ ಉಲ್ಲಂಘಿಸಿತ್ತು. ಇದರಿಂದಾಗಿ ಇಬ್ಬರು ಭಾರತೀಯ ಸೈನಿಕರು ಹಾಗೂ ಓರ್ವ ನಾಗರಿಕ ಸಾವನ್ನಪ್ಪಿದ್ದರು. ಈ ಘಟನೆ ನಂತರ ಭಾರತೀಯ ಸೇನೆ ಉಗ್ರರ ತರಬೇತಿ ಕೇಂದ್ರಗಳ ಮೇಲೆ ದಾಳಿ ನಡೆಸಿತ್ತು.

Share This Article
Leave a Comment

Leave a Reply

Your email address will not be published. Required fields are marked *