ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ ಪಾಕ್ ವೇಗಿ ಮೊಹಮ್ಮದ್ ಅಮೀರ್

Public TV
1 Min Read

ಇಸ್ಲಮಾಬಾದ್: ಟೆಸ್ಟ್ ಮಾದರಿಯ ಕ್ರಿಕೆಟ್‍ಗೆ ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಅಮೀರ್ ಅವರು ನಿವೃತ್ತಿ ಘೋಷಿಸಿದ್ದಾರೆ. ಆದರೆ ಏಕದಿನ ಕ್ರಿಕೆಟ್‍ನಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ.

ಪಾಕಿಸ್ತಾನದ ಪರ 36 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಮೀರ್ 30.47 ಸರಾಸರಿಯಲ್ಲಿ 119 ವಿಕೆಟ್ ಪಡೆದಿದ್ದಾರೆ. 2017ರ ಏಪ್ರಿಲ್‍ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 44 ರನ್ ಕೊಟ್ಟು 6 ವಿಕೆಟ್ ಕಬಳಿಸಿದ್ದು ಇವರ ಅತ್ಯುತ್ತಮ ಬೌಲಿಂಗ್ ಪ್ರದರ್ಶವಾಗಿದೆ.

ನಿವೃತ್ತಿ ಕುರಿತು ಮಾತನಾಡಿರುವ ಮೊಹಮ್ಮದ್ ಅಮೀರ್ “ಕ್ರಿಕೆಟ್‍ನ ಸಂಪ್ರದಾಯಿಕ ಸ್ವರೂಪವಾದ ಟೆಸ್ಟ್ ಕ್ರಿಕೆಟ್‍ನಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸುವುದಕ್ಕೆ ಗೌರವವಿದೆ. ನಾನು ಟೆಸ್ಟ್ ಕ್ರಿಕೆಟ್‍ನಿಂದ ನಿವೃತ್ತಿ ಹೊಂದಲು ನಿರ್ಧಾರ ಮಾಡಿದ್ದೇನೆ. ಈ ಮೂಲಕ ಏಕದಿನ ಕ್ರಿಕೆಟ್‍ನಲ್ಲಿ ಹೆಚ್ಚಿನ ಗಮನಹರಿಸಲು ತೀರ್ಮಾನ ಮಾಡಿದ್ದೇನೆ” ಎಂದು ಹೇಳಿದ್ದಾರೆ.

ಪಾಕಿಸ್ತಾನಕ್ಕಾಗಿ ಆಡುವುದು ನನ್ನ ಅಂತಿಮ ಆಸೆ ಮತ್ತು ಉದ್ದೇಶವಾಗಿ ಉಳಿದಿದೆ ಮತ್ತು ಮುಂದಿನ ವರ್ಷದ ಐಸಿಸಿ ಟಿ 20 ವಿಶ್ವಕಪ್ ಸೇರಿದಂತೆ ತಂಡದ ಮುಂಬರುವ ಸವಾಲುಗಳಲ್ಲಿ ಉತ್ತಮ ಕೊಡುಗೆ ನೀಡಲು ನಾನು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ. ಎಡಗೈ ವೇಗಿಯಾದ ಮೊಹಮ್ಮದ್ ಅಮೀರ್ 2009ರ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದರು.

ಇಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಮೀರ್ “ನಾನು ಇಂದು ತೆಗೆದುಕೊಂಡಿರುವುದು ಸುಲಭದ ನಿರ್ಧಾರವಲ್ಲ. ಈ ವಿಚಾರದ ಬಗ್ಗೆ ನಾನು ತುಂಬಾ ಸಮಯದಿಂದ ಯೋಚನೆ ಮಾಡಿದ್ದೆ. ಇನ್ನೂ ಕೆಲವೇ ದಿನಗಳಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಬರುತ್ತಿದೆ. ಆಗಲೇ ಪಾಕಿಸ್ತಾನದಲ್ಲಿ ಉತ್ತಮ ಯುವ ವೇಗಿಗಳು ಇದ್ದಾರೆ. ಅದ್ದರಿಂದ ನಾನು ಈ ಸಮಯದಲ್ಲಿ ನಿವೃತ್ತಿ ಘೋಷಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.

ಈ ವೇಳೆ ಮಾತನಾಡಿದ ಪಿಸಿಬಿ ವ್ಯವಸ್ಥಾಪಕ ನಿರ್ದೇಶಕ ವಾಸಿಮ್ ಖಾನ್, ಅಮೀರ್ ಇತ್ತೀಚಿನ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್‍ನಲ್ಲಿ ಅತ್ಯಂತ ರೋಮಾಂಚಕಾರಿ ಮತ್ತು ಪ್ರತಿಭಾವಂತ ಎಡಗೈ ವೇಗದ ಬೌಲರ್‍ ಗಳಲ್ಲಿ ಒಬ್ಬರಾಗಿದ್ದಾರೆ. ನಿವೃತ್ತಿ ಮೂಲಕ ಯುವ ಆಟಗಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರು ಕ್ರಿಕೆಟರ್ ಹೊರತಾಗಿಯೂ ಒಬ್ಬ ಒಳ್ಳೆಯ ವ್ಯಕ್ತಿ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *