ಐಪಿಎಲ್‍ಗಾಗಿ ಏಷ್ಯಾಕಪ್ ಮುಂದೂಡಲು ಸಾಧ್ಯವೇ ಇಲ್ಲ: ಪಿಸಿಬಿ

Public TV
2 Min Read

ಇಸ್ಲಾಮಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗಾಗಿ ಏಪ್ಯಾಕಪ್ ಮುಂದೂಡಲು ಸಾಧ್ಯವೇ ಇಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ.

ಪಿಸಿಬಿ ಈ ತಿಂಗಳಲ್ಲಿ ಎರಡನೇ ಬಾರಿಗೆ ಏಷ್ಯಾ ಕಪ್ ಮತ್ತು ಐಪಿಎಲ್ ಬಗ್ಗೆ ಹೇಳಿಕೆ ನೀಡಿದೆ. ಏಷ್ಯಾಕಪ್‍ನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಪಿಸಿಬಿ ಸಿಇಒ ವಾಸಿಮ್ ಖಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕೊರೊನೊ ವೈರಸ್ ಬಿಕ್ಕಟ್ಟು ಕಡಿಮೆಯಾದರೆ ಯುಎಇಯಲ್ಲಿ ಏಪ್ಯಾಕಪ್ ಟೂರ್ನಿಯು ಸೆಪ್ಟೆಂಬರ್‍ನಲ್ಲಿ ನಡೆಯಲಿದೆ. ಆದರೆ ಟೂರ್ನಿಯನ್ನು ಐಪಿಎಲ್‍ಗಾಗಿಯೇ ಮುಂದೂಡಲು ಆಗುವುದಿಲ್ಲ ಎಂದು ಪಿಸಿಬಿ ಸಿಇಒ ವಾಸಿಮ್ ಖಾನ್ ಹೇಳಿದ್ದಾರೆ.

”ನಮ್ಮ ನಿಲುವು ತುಂಬಾ ಸ್ಪಷ್ಟವಾಗಿದ್ದು, ಏಷ್ಯಾಕಪ್ ಸೆಪ್ಟೆಂಬರ್‍ನಲ್ಲಿ ನಡೆಯಲಿದೆ. ಆ ಸಮಯದಲ್ಲಿ ಕೊರೊನಾ ಭೀತಿ ಇದ್ದರೆ ಮಾತ್ರ ಟೂರ್ನಿಯನ್ನು ಮುಂದೂಡಲಾಗುತ್ತದೆ. ಆದರೆ ಐಪಿಎಲ್‍ಗಾಗಿ ಏಷ್ಯಾಕಪ್‍ನ ವೇಳಾಪಟ್ಟಿಯಲ್ಲಿ ಏನಾದರೂ ಬದಲಾವಣೆಗಳಿದ್ದರೆ ಅದನ್ನು ಒಪ್ಪುವುದಿಲ್ಲ. ಏಷ್ಯಾಕಪ್ ಟೂರ್ನಿಯನ್ನು ನವೆಂಬರ್ ಅಥವಾ ಡಿಸೆಂಬರ್‍ಗೆ ಮುಂದೂಡುವ ಬಗ್ಗೆ ಚರ್ಚೆ ನಡೆದಿದೆ ಎಂಬ ಮಾಹಿತಿ ಲಭಿಸಿದೆ. ಆದರೆ ಇದು ನಮಗೆ ಸಾಧ್ಯವಿಲ್ಲ. ಯಾವುದೇ ಒಂದು ಸದಸ್ಯ ದೇಶಕ್ಕಾಗಿ ಏಷ್ಯಾಕಪ್ ಟೂರ್ನಿಯ ದಿನಾಂಕವನ್ನು ಬದಲಾಯಿಸುವುದು ಸರಿಯಲ್ಲ. ಇದಕ್ಕೆ ನಮ್ಮ ಬೆಂಬಲ ಇಲ್ಲ” ಎಂದು ವಾಸಿಮ್ ಖಾನ್ ತಿಳಿಸಿದ್ದಾರೆ.

ಏಷ್ಯಾಕಪ್ ಭಾರತ-ಪಾಕ್ ವಿಷಯವಲ್ಲ:
ಇದಕ್ಕೂ ಮುನ್ನ ಏಪ್ರಿಲ್ 14ರಂದು ಪಿಸಿಬಿ ಅಧ್ಯಕ್ಷ ಎಹ್ಸಾನ್ ಮನಿ ಕೂಡ ಇದೇ ಮಾತನ್ನು ಹೇಳಿದ್ದರು. ”ನಾನು ಈ ಎಲ್ಲಾ ಊಹಾಪೋಹಗಳ ಬಗ್ಗೆ ಓದಿದ್ದೇನೆ ಮತ್ತು ಕೇಳಿದ್ದೇನೆ. ಆದರೆ ಈಗ ಏಷ್ಯಾಕಪ್ ನಡೆಸಬೇಕೋ ಬೇಡವೋ ಎಂಬುದು ಕೇವಲ ಭಾರತ-ಪಾಕಿಸ್ತಾನದ ವಿಷಯವಲ್ಲ. ಈ ಟೂರ್ನಿಯಲ್ಲಿ ಇನ್ನೂ ಅನೇಕ ದೇಶಗಳು ಭಾಗವಹಿಸುತ್ತವೆ. ಇದನ್ನು ಗಮನದಲ್ಲಿ ಇಟ್ಟುಕೊಂಡೇ ನಿರ್ಧಾರಾ ಕೈಗೊಳ್ಳಬೇಕು” ಎಂದಿದ್ದರು.

ಈ ಮೊದಲ ಏಷ್ಯಾ ಕಪ್ ಟೂರ್ನಿ ಪಾಕಿಸ್ತಾನದಲ್ಲಿ ನಡೆಯಬೇಕಿತ್ತು. ಆದರೆ ಭಾರತದ ಆಕ್ಷೇಪಣೆಯ ನಂತರ ಅದನ್ನು ಯುಎಇಗೆ ವರ್ಗಾಯಿಸಲಾಯಿತು. ಟೂರ್ನಿಯ ಆಯೋಜಿಸುವ ಜವಾಬ್ದಾರಿ ಪಾಕಿಸ್ತಾನಕ್ಕಿದೆ. ಹೀಗಾಗಿ ಪಿಸಿಬಿ ಪಟ್ಟು ಸಾಧಿಸಲು ಮುಂದಾಗಿದೆ.

ಏಷ್ಯಾಕಪ್‍ನಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿವೆ. ಅವುಗಳೆಂದರೆ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ. ಆರನೇ ತಂಡವನ್ನು ಅರ್ಹತಾ ಪಂದ್ಯಗಳ ಮೂಲಕ ನಿರ್ಧರಿಸಲಾಗುತ್ತದೆ. ಮೊದಲ ಏಷ್ಯಾ ಕಪ್ ಟೂರ್ನಿ 1984ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಡೆಸಿತ್ತು. ಟೂರ್ನಿಯು ಪ್ರತಿ 2 ವರ್ಷಗಳಿಗೊಮ್ಮೆ ನಡೆಯುತ್ತದೆ. ಟೀಂ ಇಂಡಿಯಾ ಇದುವರೆಗೆ 7 ಬಾರಿ ಏಷ್ಯಾ ಕಪ್ ಗೆದ್ದು ಬೀಗಿದೆ. ಶ್ರೀಲಂಕಾ 5 ಬಾರಿ ಮತ್ತು ಪಾಕಿಸ್ತಾನ 2 ಬಾರಿ ಚಾಂಪಿಯನ್ ಆಗಿವೆ. ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡಗಳು ಈವರೆಗೂ ಏಪ್ಯಾ ಕಪ್ ಗೆದ್ದಿಲ್ಲ.

ಐಪಿಎಲ್ ಅನ್ನು ಮಾರ್ಚ್ 29ರಿಂದ ಆರಂಭಿಸಬೇಕಿತ್ತು. ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ಮೊದಲು ಏಪ್ರಿಲ್ 15ಕ್ಕೆ ಮುಂದೂಡಲಾಗಿತ್ತು. ಆ ಬಳಿಕ ಲಾಕ್‍ಡೌನ್ ಅನ್ನು ಮೇ 3ರವರೆಗೂ ಕೇಂದ್ರ ಸರ್ಕಾರ ವಿಸ್ತರಿಸಿದ ಬೆನ್ನಲ್ಲೇ ಬಿಸಿಸಿಐ ಅನಿರ್ದಿಷ್ಟಾವಧಿಗೆ ಐಪಿಎಲ್ ಮುಂದೂಡಿತು.

ಮೂಲಗಳ ಪ್ರಕಾರ ಏಷ್ಯಾಕಪ್ ಟೂರ್ನಿಯನ್ನು ಮುಂದೂಡಿದರೆ ಸೆಪ್ಟೆಂಬರ್ ಅಥವಾ ನವೆಂಬರ್-ಡಿಸೆಂಬರ್ ನಡುವೆ ಬಿಸಿಸಿಐ ಐಪಿಎಲ್ ಅನ್ನು ನಡೆಸಲು ಮುಂದಾಗಿದೆ. ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *