ಲಂಡನ್: ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಮಿಕ್ಕಿ ಅರ್ಥರ್ ವಿಶ್ವಕಪ್ ಟೂರ್ನಿಯ ಟೀಂ ಇಂಡಿಯಾ ವಿರುದ್ಧದ ಪಂದ್ಯದ ಸೋಲಿನ ಬಳಿಕ ಆತ್ಮಹತ್ಯೆಗೆ ಚಿಂತನೆ ನಡೆಸಿದ್ದೆ ಎಂಬ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
ಜೂನ್ 16 ರಂದು ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 89 ರನ್ ಗಳ ಜಯ ಪಡೆದಿತ್ತು. ಅಲ್ಲದೇ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧದ ತನ್ನ ಅಮೋಘ ಜಯದ ದಾಖಲೆಯನ್ನು ಮುಂದುವರಿಸಿತ್ತು. ಭಾರತ ವಿರುದ್ಧದ ಸೋಲು ಪಾಕಿಸ್ತಾನ ತಂಡಕ್ಕೆ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‍ಗೆ ಹೋಗುವ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿತ್ತು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ನಿರ್ಣಯಕ ಪಂದ್ಯದಲ್ಲಿ ಭಾನುವಾರ ಗೆಲುವು ಪಡೆಯುವ ಮೂಲಕ ತನ್ನ ಸೆಮಿ ಫೈನಲ್ ಆಸೆಯನ್ನು ಜೀವಂತವಾಗಿರಿಸಿದೆ.
Mickey Arthur "Those boys are incredibly passionate about the country they represent and they are incredibly passionate about their cricket" #CWC19 pic.twitter.com/e5roUobf1M
— Saj Sadiq (@SajSadiqCricket) June 24, 2019
ಪಂದ್ಯದ ಬಳಿಕ ಮಾತನಾಡಿರುವ ಮಿಕ್ಕಿ, ಕಳೆದ ಭಾನುವಾರ ನಾನು ಆತ್ಮಹತ್ಯೆ ಮಾಡಿಕೊಳ್ಳುವ ಚಿಂತನೆ ಮಾಡಿದ್ದೆ. ಭಾರತ ವಿರುದ್ಧ ಪಂದ್ಯ ನಮಗೆ ಬಹಳ ಮುಖ್ಯವಾಗಿತ್ತು. ವಿಶ್ವಕಪ್ ಟೂರ್ನಿಯಲ್ಲಿ ಸೋಲಿನ ಮೇಲೆ ಸೋಲು ಸ್ವೀಕರಿಸುವುದು ಕಷ್ಟಸಾಧ್ಯವಾಗುತ್ತದೆ. ಜನರು ನಿರೀಕ್ಷೆ ಹಾಗೂ ಮಾಧ್ಯಮಗಳ ಒತ್ತಡದಿಂದ ಇಕ್ಕಟ್ಟಿಗೆ ಸಿಲುಕಿದ್ದೆ. ಈ ವೇಳೆ ಆತ್ಮಹತ್ಯೆ ಚಿಂತನೆ ಬಂದಿತ್ತು ಎಂದಿದ್ದಾರೆ.
ಭಾರತದ ವಿರುದ್ಧ ಸೋಲಿನ ಬಳಿಕ ಪಾಕಿಸ್ತಾನ ತಂಡದ ವಿರುದ್ಧ ಕಟು ಟೀಕೆಗಳು ಕೇಳಿ ಬಂದಿದ್ದವು. ಸದ್ಯ ಮಿಕ್ಕಿ ಇಂದಿನ ಹೇಳಿಕೆಗಳಿಗೂ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡಿದ್ದು, ಕೋಚ್‍ರ ಮಾತುಗಳು ಕೆಟ್ಟ ಅಭಿರುಚಿಯನ್ನು ತೋರುತ್ತದೆ ಎಂದಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಸೆಮಿ ಫೈನಲ್ ಹಂತ ತಲುಪಬೇಕಾದರೆ ಉಳಿರುವ 3 ಪಂದ್ಯಗಳಲ್ಲಿ ಗೆಲುವು ಪಡೆಯುವುದು ಅನಿವಾರ್ಯವಾಗಿದೆ. ಅಲ್ಲದೇ ಪಾಕ್ ರನ್ ರೇಟ್ ಕೂಡ ಇದರ ಮೇಲೆ ಪ್ರಾಮುಖ್ಯತೆ ಪಡೆದಿದೆ. ಪಾಕಿಸ್ತಾನ ತಂಡ ನಾಳಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.