ಸಿಂಧೂ ನದಿ ನೀರು ನಿಲ್ಲಿಸಿದ್ರೆ ನಿಮ್ಮ ಉಸಿರು ನಿಲ್ಲಿಸ್ತೀವಿ, ಉಗ್ರ ಹಫೀಜ್‌ನ ಮಾತನ್ನೇ ಪುನರುಚ್ಚರಿಸಿದ ಪಾಕ್‌ ಸೇನಾ ವಕ್ತಾರ

Public TV
2 Min Read

ಇಸ್ಲಮಾಬಾದ್:‌ ನೀವು ನಮಗೆ ಬರಬೇಕಾದ ನೀರನ್ನು ನಿರ್ಬಂಧಿಸಿದರೆ, ನಾವು ನಿಮ್ಮ ಉಸಿರನ್ನು ನಿಲ್ಲಿಸ್ತೇವೆ ಎಂದು ಹೇಳಿದ್ದ ಉಗ್ರ ಹಫೀಜ್ ಸಯೀದ್ ಮಾತನ್ನೇ ಪಾಕಿಸ್ತಾನದ (Pakistan) ಸೇನಾ ವಕ್ತಾರ ಅಹ್ಮದ್ ಷರೀಫ್ ಪುನರುಚ್ಚರಿಸಿದ್ದಾನೆ.

ಪಾಕಿಸ್ತಾನದ ವಿಶ್ವವಿದ್ಯಾಲಯವೊಂದರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಭಾರತವು (India) ಸಿಂಧೂ ನದಿ ನೀರಿನ ಒಪ್ಪಂದ (Indus Waters Treaty) ಅಮಾನತು ಮಾಡಿರುವ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ, ಭಾರತ ನೀರು ನಿಲ್ಲಿಸಿದರೆ, ನಾವು ನಿಮ್ಮ ಉಸಿರನ್ನು ಕಟ್ಟಿ ಹಾಕುತ್ತೇವೆ ಎಂದು ಹೇಳಿದ್ದಾನೆ. ಇದನ್ನೂ ಓದಿ: ಐಷಾರಾಮಿ ಕಾರುಗಳಲ್ಲಿ ಪ್ರಯಾಣ, ಪಾಕ್‌ ಸೇನೆಯ ನಂಬಿಕಸ್ಥನೇ ದಾಳಿಯ ಮಾಸ್ಟರ್‌ ಮೈಂಡ್‌!

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ನಂತರ ನೀರು ಹಂಚಿಕೆ ಒಪ್ಪಂದವನ್ನು ಭಾರತ ಅಮಾನತುಗೊಳಿಸಿತ್ತು. ಭಾರತದ ಈ ಕ್ರಮವನ್ನು ಉಲ್ಲೇಖಿಸಿ, 2008ರ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್-ಎ-ತೈಬಾ ಸಂಸ್ಥಾಪಕ ಹಫೀಜ್ ಸಯೀದ್ ಸಹ ಇದೇ ಹೇಳಿಕೆ ನೀಡಿದ್ದ. ಇದೀಗ ಪಾಕ್‌ ಸೇನಾ ವಕ್ತಾರ ಸಹ ಅದನ್ನೇ ಪುನರುಚ್ಚರಿಸಿದ್ದಾನೆ. ಪಾಕ್‌ ಸೇನಾ ವಕ್ತಾರ ಕಾರ್ಯಕ್ರಮದಲ್ಲಿ ಮಾತಾಡುತ್ತಿರುವ ವೀಡಿಯೋ ಎಕ್ಸ್‌ನಲ್ಲಿ ವೈರಲ್‌ ಆಗಿದೆ.

ಏ.22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಏ.23 ರಂದು ಭಾರತ ಸಿಂಧೂ ಜಲ ಒಪ್ಪಂದವನ್ನು ಅಮಾನತು ಮಾಡಿತ್ತು. 1960 ರಲ್ಲಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಎರಡು ದೇಶಗಳ ನಡುವೆ ಸಿಂಧೂ ನದಿ ಮತ್ತು ಅದರ ಉಪನದಿಗಳ ಹಂಚಿಕೆಯ ಒಪ್ಪಂದ ನಡೆದಿತ್ತು.

ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಮೇ 7 ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಒಂಬತ್ತು ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ʻಆಪರೇಷನ್ ಸಿಂಧೂರʼ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ 100ಕ್ಕೂ ಹೆಚ್ಚು ಉಗ್ರರನ್ನು ಹತ್ಯೆಗೈದಿತ್ತು. ಇದನ್ನೂ ಓದಿ: Pahalgam Attack | ಟಿಆರ್‌ಎಫ್‌ಗೆ ಭಾರತೀಯ ಯುವಕರೇ ಟಾರ್ಗೆಟ್‌ – ಈ ಭಯೋತ್ಪಾದಕ ಗುಂಪು ಹೇಗೆ ಕೆಲಸ ಮಾಡುತ್ತೆ?

Share This Article