ಬಂಕರ್‌ಗಳನ್ನು ನಿರ್ಮಿಸಿ – ಎಲ್‍ಒಸಿ ನಿವಾಸಿಗಳಿಗೆ ಪಾಕ್ ಸೂಚನೆ

Public TV
2 Min Read

– ಖಾಸಗಿ ಆಸ್ಪತ್ರೆಗಳು ಶೇ.25ರಷ್ಟು ಹಾಸಿಗೆ ಸೈನಿಕರಿಗೆ ಮೀಸಲಿಡಿ
– ಗುಂಪಾಗಿ ಚರ್ಚೆ ನಡೆಸಬೇಡಿ, ರಾತ್ರಿ ಲೈಟ್ ಹಾಕಬೇಡಿ
– ಗ್ರಾಮಸ್ಥರಿಗೆ ಪಾಕ್ ಅಧಿಕಾರಿಗಳಿಗಳಿಂದ ಎಚ್ಚರಿಕೆ

ಶ್ರೀನಗರ: ಯಾವುದೇ ಕ್ಷಣದಲ್ಲಿ ಭಾರತ ನಮ್ಮ ಮೇಲೆ ದಾಳಿ ಮಾಡಬಹುದು ಎನ್ನುವ ಭೀತಿಗೆ ಒಳಗಾಗಿರುವ ಪಾಕಿಸ್ತಾನ ಈಗ ಪಾಕ್ ಆಕ್ರಮಿತ ಕಾಶ್ಮೀರದ ಜನತೆಗೆ ಬಂಕರ್ ನಿರ್ಮಿಸುವಂತೆ ಸೂಚನೆ ನೀಡಿದೆ.

ಗಡಿ ನಿಯಂತ್ರಣ ರೇಖೆಯ ಬಳಿ ಇರುವ ಗ್ರಾಮಸ್ಥರಿಗೆ ಪಾಕಿಸ್ತಾನದ ಅಧಿಕಾರಿಗಳು ಸುರಕ್ಷಿತ ಜಾಗಗಳಲ್ಲಿ ಸಂಚರಿಸಿ ಎಂದು ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಸೂಕ್ಷ್ಮ ಪ್ರದೇಶಗಳಲ್ಲಿ ಗುಂಪಾಗಿ ಚರ್ಚೆ ನಡೆಸಬೇಡಿ ಎಂದು ಸೂಚಿಸಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

ರಾತ್ರಿಯ ವೇಳೆ ಅನಾವಶ್ಯಕವಾಗಿ ಲೈಟ್ ಹಾಕಬೇಡಿ. ಗಡಿ ನಿಯಂತ್ರಣ ರೇಖೆಯ ಬಳಿ ಪ್ರಾಣಿಗಳನ್ನು ತೆಗೆದುಕೊಂಡು ಹೋಗಬೇಡಿ. ಇದರ ಜೊತೆಗೆ ಯಾರ ಮನೆಯಲ್ಲಿ ಬಂಕರ್ ಗಳು ನಿರ್ಮಾಣವಾಗಿಲ್ಲವೋ ಅವರೆಲ್ಲ ಅದಷ್ಟು ಶೀಘ್ರವೇ ಬಂಕರ್ ಗಳನ್ನು ನಿರ್ಮಿಸಿ ಎನ್ನುವ ಸೂಚನೆಯನ್ನು ಸ್ಥಳೀಯ ಅಧಿಕಾರಿಗಳು ಗ್ರಾಮಸ್ಥರಿಗೆ ನೀಡಿದ್ದಾರೆ.

ಒಂದು ವೇಳೆ ಯುದ್ಧ ನಡೆದರೆ ಅದಕ್ಕೂ ಸಿದ್ಧವಾಗಿರುವಂತೆ ಪಾಕಿಸ್ತಾನ ಸೇನೆ ಆಸ್ಪತ್ರೆಗಳಿಗೆ ಸೂಚಿಸಿದೆ. ಯುದ್ಧ ಆರಂಭವಾದರೆ ವೈದ್ಯಕೀಯ ಸಹಕಾರಕ್ಕೆ ಹೇಗೆ ಸಿದ್ಧವಾಗಿದ್ದೀರಿ. ನಿಮ್ಮಲ್ಲಿ ಎಷ್ಟು ಹಾಸಿಗೆಗಳಿವೆ ಎನ್ನುವುದನ್ನು ತಿಳಿಸಿ ಹೆಡ್‍ಕ್ವಾರ್ಟರ್ಸ್ ಕ್ವೆಟ್ಟಾ ಲಾಜಿಸ್ಟಿಕ್ಸ್ ಏರಿಯಾ( ಎಚ್‍ಕ್ಯೂಎಲ್‍ಎ) ಕಾಂಟೋನ್ಮೆಂಟ್ ಜಿಲಾನಿ ಆಸ್ಪತ್ರೆಗೆ ಫೆ.20 ರಂದು ಪತ್ರ ಬರೆದಿದೆ.  ಇದನ್ನೂ ಓದಿ: ಭಾರತ ಕೊಟ್ಟ ಶಾಕ್‍ಗೆ ತಲೆಬಾಗಿ ಉಗ್ರ ಸಂಘಟನೆ ನಿಷೇಧಿಸಿದ ಪಾಕ್

ಒಂದು ವೇಳೆ ಪೂರ್ವ ಭಾಗದಲ್ಲಿ ಯುದ್ಧ ಆರಂಭವಾದರೆ ಕ್ವೆಟ್ಟಾ ಲಾಜಿಸ್ಟಿಕ್ಸ್ ಏರಿಯಾ ಸಿಂಧ್ ಮತ್ತು ಪಂಜಾಬ್ ಪ್ರದೇಶದಲ್ಲಿ ಗಾಯಗೊಂಡ ಸೈನಿಕರನ್ನು ರಕ್ಷಿಸಬೇಕಾಗುತ್ತದೆ. ಸೈನಿಕರಿಗೆ ಮಿಲಿಟರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಬಲೂಚಿಸ್ತಾನಕ್ಕೆ ಶಿಫ್ಟ್ ಮಾಡಲು ಪಾಕ್ ಸೇನೆ ನಿರ್ಧರಿಸಿದೆ. ಅಷ್ಟೇ ಅಲ್ಲದೇ ಖಾಸಗಿ ಆಸ್ಪತ್ರೆಗಳು ಶೇ.25 ರಷ್ಟು ಹಾಸಿಗೆಗಳನ್ನು ಗಾಯಗೊಂಡ ಸೈನಿಕರಿಗೆ ಮೀಸಲಿಡಬೇಕು ಎಂದು ಪಾಕ್ ಸೇನೆ ಪತ್ರದ ಮೂಲಕ ಈಗಲೇ ಸೂಚನೆ ನೀಡಿದೆ.

ಉರಿ ಸೇನಾ ನೆಲೆಯ ಮೇಲೆ ಉಗ್ರರ ದಾಳಿ ಬಳಿಕ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರ ನೆಲೆಗಳನ್ನೇ ಧ್ವಂಸ ಮಾಡಿತ್ತು. ಈಗ ಪುಲ್ವಾಮಾ ದಾಳಿ ಬಳಿಕ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಬಹುದು ಎನ್ನುವ ಭೀತಿಯಿಂದ ಪಾಕ್ ಗ್ರಾಮಸ್ಥರಿಗೆ ಈಗಲೇ ಎಚ್ಚರಿಕೆ ನೀಡಿ ಎಲ್ಲ ದಾಳಿಗಳನ್ನು ಎದುರಿಸಲು ಸಿದ್ಧವಾಗಿರಿ ಎಂದು ಸೂಚಿಸಿದೆ.

https://twitter.com/KashmirPivot/status/1098482610127466498

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

 

 

Share This Article
Leave a Comment

Leave a Reply

Your email address will not be published. Required fields are marked *