ಮುಂಬೈ ಟೆರರ್ ಅಟ್ಯಾಕ್ – ಪಾಕ್ ಮೂಲದ ರಾಣಾ ಹಸ್ತಾಂತರಕ್ಕೆ ಯುಎಸ್ ಕೋರ್ಟ್ ಅಸ್ತು

Public TV
1 Min Read

ವಾಷಿಂಗ್ಟನ್: 2008ರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ (Mumbai Terror Attack) ಭಾಗಿಯಾಗಿರುವ ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವ್ವುರ್ ರಾಣಾನನ್ನು (Tahawwur Rana) ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಅಮೆರಿಕ ಕೋರ್ಟ್ (US Court) ತೀರ್ಪು ನೀಡಿದೆ.

ಎರಡು ದೇಶಗಳ ನಡುವಿನ (ಭಾರತ-ಯುಎಸ್ ಹಸ್ತಾಂತರ) ಒಪ್ಪಂದವು ರಾಣಾ ಹಸ್ತಾಂತರಕ್ಕೆ ಅನುಮತಿ ನೀಡುತ್ತದೆ ಎಂದು ನ್ಯಾಯಾಲಯವು ತೀರ್ಪಿನಲ್ಲಿ ಹೇಳಿದೆ. ಈ ತೀರ್ಪಿನಿಂದ ರಾಣಾಗೆ ತೀವ್ರ ಹಿನ್ನಡೆಯಾಗಿದೆ.

ರಾಣಾ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಆಪಾದಿತ ರಾಣಾ ಎಸಗಿದ ಅಪರಾಧ ಅಮೆರಿಕ ಮತ್ತು ಭಾರತದ ನಡುವಿನ ಹಸ್ತಾಂತರ ಒಪ್ಪಂದದ ನಿಯಮಗಳಿಗೆ ಒಳಪಟ್ಟಿದೆ ಎಂದು ಅಭಿಪ್ರಾಯಪಟ್ಟಿದೆ. ರಾಣಾ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವುದಕ್ಕೆ ಭಾರತವು ಸಾಕಷ್ಟು ಸಮರ್ಥ ಪುರಾವೆಗಳನ್ನು ಒದಗಿಸಿದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಣಾಗೆ ಅವಕಾಶವಿದೆ.

2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ನ್ಯಾಯಾಲಯ ಈ ಹಿಂದೆ ಅನುಮೋದನೆ ನೀಡಿತ್ತು. ಇದರ ವಿರುದ್ಧ ಆತ ಮತ್ತೆ ಕಾನೂನಿನ ಮೊರೆ ಹೋಗಿದ್ದ.

ಮುಂಬೈನ ತಾಜ್ ಹೋಟೆಲ್ ಮತ್ತು ಪ್ರಮುಖ ಸ್ಥಳಗಳ ಮೇಲೆ ನಡೆದಿದ್ದ ದಾಳಿಯಲ್ಲಿ 6 ಅಮೆರಿಕನ್ನರು ಸೇರಿದಂತೆ 160 ಜನ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಣಾನನ್ನು ಅಮೆರಿಕದಲ್ಲಿ ಬಂಧಿಸಲಾಗಿತ್ತು.

Share This Article