ಗಂಡನ ಕೊಲ್ಲಲು ಹಾಲಿಗೆ ವಿಷ ಹಾಕಿದ್ಳು – ಅದೇ ಹಾಲಿನಿಂದ ಮಾಡಿದ ಲಸ್ಸಿ ಕುಡಿದು 13 ಸಾವು – ಪ್ರೀತಿ ಮಾಯೆ ಹುಷಾರು!

Public TV
2 Min Read

ಮುಜಾಫರ್ ಗಢ: ಪ್ರಿಯತಮನ ಸೇರಿಕೊಳ್ಳುವ ಆಸೆಯಿಂದ ಗಂಡನನ್ನು ಕೊಲ್ಲಲು ಸಿದ್ಧಪಡಿಸಿದ ವಿಷಪೂರಿತ ಹಾಲು ಸೇವಿಸಿ ಒಂದೇ ಕುಟುಂಬದ 13 ಮಂದಿ ಸಾವನ್ನಪ್ಪಿದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ. ಇಲ್ಲಿನ ಲಷಾರಿ ಸಮೀಪದ ತೆಹ್ಸಿಲ್ ಅಲಿಪುರದಲ್ಲಿ ಅಕ್ಟೋಬರ್ 24ರಂದು ಈ ಘಟನೆ ಸಂಭವಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಆಗಿದ್ದೇನು?: ಒಂದು ತಿಂಗಳ ಹಿಂದೆ ಇಲ್ಲಿನ ದೌಲತ್ ಪುರ್ ಏರಿಯಾದ ಅಮ್ಜದ್ ಎಂಬಾತನಿಗೆ ಅಸಿಯಾ ಬೀಬಿ ಎಂಬಾಕೆಯನ್ನು ಮದುವೆ ಮಾಡಿ ಕೊಟ್ಟಿದ್ದರು. ಆದರೆ ಆಸಿಯಾ ಬೀಬಿಗೆ ಇದಕ್ಕೂ ಮುನ್ನವೇ ಶಾಹಿದ್ ಎಂಬಾತನ ಜೊತೆ ಲವ್ ಆಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಆಸಿಯಾ ಕುಟುಂಬಸ್ಥರು ಆಕೆಗೆ ಅಮ್ಜದ್ ಜೊತೆ ಮದುವೆ ಫಿಕ್ಸ್ ಮಾಡಿದ್ದರು.

ಅಮ್ಜದ್ ಜೊತೆ ವಿವಾಹವಾಗಿದ್ದರೂ ಆಕೆ ನಿರಂತರವಾಗಿ ಶಾಹಿದ್ ಸಂಪರ್ಕದಲ್ಲಿದ್ದಳು. ಅಲ್ಲದೆ ಗಂಡನ ಮನೆಯಿಂದ ತವರು ಮನೆಗೆ ವಾಪಸ್ ಬಂದಿದ್ದಳು. ಆದರೆ ಮನೆಯವರು ಮತ್ತೆ ಬಲವಂತ ಮಾಡಿ ಆಕೆಯನ್ನು ಪತಿಯ ಮನೆಗೆ ಕಳಿಸಿದ್ದರು. ಇಷ್ಟೆಲ್ಲಾ ಆದ್ಮೇಲೆ ಆಕೆ ಅಮ್ಜದ್ ನನ್ನು ಕೊಲ್ಲಲು ಸಂಚು ರೂಪಿಸುತ್ತಾಳೆ. ಆಗ ಆಕೆಗೆ ಹೊಳೆದಿದ್ದೇ ಹಾಲಿಗೆ ವಿಷ ಹಾಕುವ ಪ್ಲ್ಯಾನ್.

ಈ ಪ್ಲ್ಯಾನ್ ನಂತೆಯೇ ಆಸಿಯಾ ತನ್ನ ಗಂಡನಿಗೆ ಕೊಡಬೇಕಾದ ಹಾಲಿಗೆ ವಿಷ ಬೆರೆಸಿ ತೆಗೆದಿಟ್ಟಿರುತ್ತಾಳೆ. ಆದರೆ ಅಂದು ಅಮ್ಜದ್ ಹಾಲು ಕುಡಿಯಲೇ ಇಲ್ಲ. ಹೀಗಾಗಿ ಆ ಹಾಲನ್ನು ಲಸ್ಸಿ ಮಾಡಿದ್ದಾರೆ. ಇದನ್ನು ಕುಟುಂಬದ ಎಲ್ಲಾ ಸದಸ್ಯರಿಗೆ ಹಂಚಿದ್ದಾರೆ. ಲಸ್ಸಿ ಕುಡಿದ 14 ಮಂದಿಯಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ.

ವಿಷಯ ತಿಳಿದ ತಕ್ಷಣ ಪೊಲೀಸರು ಆಸಿಯಾ, ಆಕೆಯ ಪ್ರಿಯತಮ ಶಾಹಿದ್ ಆತನ ಅತ್ತೆ ಝರೀನಾ ಮಾಯಿಯನ್ನು ಬಂಧಿಸಿದ್ದಾರೆ. ಆದರೆ ಆಸಿಯಾ ಮಾತ್ರ ತನ್ನ ವಿರುದ್ಧದ ಆರೋಪವನ್ನು ತಿರಸ್ಕರಿಸಿದ್ದಾಳೆ. ಶಾಹಿದ್ ನನಗೆ ವಿಷ ಬೆರೆಸುವಂತೆ ಹೇಳಿದ್ದ. ಆದರೆ ನಾನು ವಿಷ ಹಾಕಿಲ್ಲ. ಶಾಹಿದ್ ನನ್ನನ್ನು ಮದುವೆಯಾಗುವಂತೆ ಕೇಳಿಕೊಂಡರೂ ನಾನು ಬೇಡಿಕೆಯನ್ನು ತಿರಸ್ಕರಿಸಿದ್ದೆ ಎಂದು ಮಾಧ್ಯಮಗಳ ಮುಂದೆ ಆಸಿಯಾ ಹೇಳಿಕೆ ನೀಡಿದ್ದಾಳೆ. ಆದರೆ ಪೊಲೀಸರು ಮಾತ್ರ ಆಸಿಯಾ ವಿಷ ಬೆರೆಸಿದ್ದನ್ನು ಒಪ್ಪಿಕೊಂಡಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.

ಪಂಜಾಬ್ ಪ್ರಾಂತ್ಯದಲ್ಲಿ ಒತ್ತಾಯಪೂರ್ವಕವಾದ ಮದುವೆ ಮಾಡಿದ ಬಳಿಕ ವಿಷ ನೀಡಿ ಸಾಯಿಸುವಂತಹ ಘಟನೆಗಳನ್ನು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿವೆ.

Share This Article
Leave a Comment

Leave a Reply

Your email address will not be published. Required fields are marked *