ಅಸ್ಸಾಂ ಪ್ರೊಫೆಸರ್ ದೇಬಶೀಶ್ ಭಟ್ಟಾಚಾರ್ಯ ಜೀವ ಉಳಿಸಿದ ಕಲಿಮಾ

Public TV
2 Min Read

– ಪಕ್ಕದಲ್ಲಿದ್ದ ವ್ಯಕ್ತಿಯ ಹಣೆಗೆ ಗುಂಡಿಕ್ಕಿ ಕೊಂದರು

ಶ್ರೀನಗರ: ಕಲಿಮಾ (Kalima) ಪಠಿಸುವಂತೆ ನಟಿಸುವ ಮೂಲಕ ಅಸ್ಸಾಂ ವಿಶ್ವವಿದ್ಯಾಲಯದ ಅಸೋಸಿಯೇಟ್ ಪ್ರೊಫೆಸರ್ ದೇಬಶೀಶ್ ಭಟ್ಟಾಚಾರ್ಯ ಅವರು ಉಗ್ರರಿಂದ (Terrorist) ತನ್ನ ಜೀವ ಉಳಿಸಿ ಪಾರಾಗಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ನನ್ನ ಕುಟುಂಬದೊಂದಿಗೆ ಮರದ ಕೆಳಗೆ ಮಲಗಿದ್ದಾಗ ಇದ್ದಕ್ಕಿದ್ದಂತೆ ನನ್ನ ಸುತ್ತಲೂ ಇದ್ದ ಕೆಲವರು ಏನೋ ಪಠಿಸುತ್ತಿದ್ದರು.

ಜನರು ಏನೋ ಪಠಿಸುವುದನ್ನು ನೋಡಿ ನಾನು ಪಠಿಸಲು ಆರಂಭಿಸಿದೆ.ಈ ವೇಳೆ ನಮ್ಮ ಕಡೆಗೆ ನಡೆದುಕೊಂಡು ಬಂದ ಉಗ್ರ ನನ್ನ ಪಕ್ಕದಲ್ಲಿ ಮಲಗಿದ್ದ ವ್ಯಕ್ತಿಯ ತಲೆಗೆ ಗುಂಡು ಹಾರಿಸಿದ.

ಗುಂಡು ಹಾರಿಸಿದ ಬಳಿಕ ಆ ಉಗ್ರ ನನ್ನನ್ನು ನೋಡಿ, ‘ಕ್ಯಾ ಕರ್ ರಹೇ ಹೋ?’ ಎಂದು ಕೇಳಿದ. ನಾನು ಕಲಿಮಾವನ್ನು ಇನ್ನೂ ಜೋರಾಗಿ ಪಠಿಸಿದೆ. ಏನೋ ಕಾರಣಕ್ಕೆ ನನ್ನನ್ನು ನೋಡಿ ಆತ ದೂರ ಹೋದ ಎಂದು ವಿವರಿಸಿದರು. ಇದನ್ನೂ ಓದಿ:ಸೌದಿಯಿಂದ ಬರೋವಾಗ ಪಾಕ್ ವಾಯುಸೀಮೆ ಬಳಸದೇ ದೆಹಲಿಗೆ ಬಂದ ಮೋದಿ

 

ಉಗ್ರ ಬೇರೆ ಕಡೆ ಹೋಗುತ್ತಿದ್ದಂತೆ ನಾನು ಪತ್ನಿ ಮತ್ತು ಮಗನೊಂದಿಗೆ ಆ ಸ್ಥಳದಿಂದ ಓಡಿ ಹೋದೆವು. ಬೆಟ್ಟ ಹತ್ತಿದೆವು, ಬೇಲಿಯನ್ನು ದಾಟಿದೆವು ಮತ್ತು ದಾರಿಯಲ್ಲಿ ಕುದುರೆಗಳ ಗೊರಸಿನ ಗುರುತುಗಳನ್ನು ಅನುಸರಿಸಿ ಸುಮಾರು ಎರಡು ಗಂಟೆಗಳ ಕಾಲ ನಡೆಯುತ್ತಲೇ ಇದ್ದೆವು. ಕೊನೆಗೆ ನಾವು ಕುದುರೆಯೊಂದಿಗೆ ಸವಾರನನ್ನು ನೋಡಿದೆವು. ಆತನ ಸಹಕಾರದಿಂದ ಕೊನೆಗೆ ಹೋಟೆಲ್‌ಗೆ ಮರಳುವಲ್ಲಿ ಯಶಸ್ವಿಯಾದೆವು.

ನಾನು ಇನ್ನೂ ಜೀವಂತವಾಗಿದ್ದೇನೆ ಎಂದು ನಂಬಲು ನನಗೆ  ಈಗಲೂ ಸಾಧ್ಯವಾಗುತ್ತಿಲ್ಲ ಎಂದು ದೇಬಶೀಶ್ ಭಟ್ಟಾಚಾರ್ಯ ಹೇಳಿದರು. ಇದನ್ನೂ ಓದಿ: ಬಾಲಾಕೋಟ್‌ ಏರ್‌ಸ್ಟ್ರೈಕ್‌ನಂತೆ ದಾಳಿ ಭೀತಿ – ಗಡಿಗೆ ವಿಮಾನಗಳನ್ನು ಸಾಗಿಸುತ್ತಿದೆ ಪಾಕ್‌

ಜಮ್ಮು ಕಾಶ್ಮೀರದಲ್ಲಿ (Jammu Kashmir) ಮತ್ತೆ ಉಗ್ರರು ಬಾಲಬಿಚ್ಚಿ ಹಿಂದೂಗಳ ನರಮೇಧ ಮಾಡಿದ್ದಾರೆ. ದಕ್ಷಿಣ ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್ (Pahalgam) ಕಣಿವೆಯಲ್ಲಿ ಹಿಂದೂಗಳನ್ನೇ (Hindu) ಗುರಿಯಾಗಿಸಿ ಕಲಿಮಾ (Kalima) ಹೇಳಲು ಬಾರದಕ್ಕೆ ತಲೆಗೆ ಗುಂಡಿಟ್ಟಿದ್ದಾರೆ. ‌

ಉಗ್ರರು ತನ್ನ ತಂದೆಯನ್ನು ಹೇಗೆ ಹತ್ಯೆ ಮಾಡಿದ್ದಾರೆ ಎಂಬುದನ್ನು ತಿಳಿಸಿದ ಅಸಾವರಿ, ಗುಂಡಿನ ದಾಳಿ ಆಗುತ್ತಿದ್ದಂತೆ ನಾವು ಟೆಂಟ್‌ ಒಳಗೆ ಹೋಗಿ ಅಡಗಿ ಕುಳಿತೆವು. ಟೆಂಟ್‌ ಬಳಿ ಬಂದ ಉಗ್ರ ತಂದೆಯನ್ನು ಹೊರಗೆ ಬರುವಂತೆ ಕರೆದ. ಟೆಂಟ್‌ನಿಂದ ಹೊರ ಬಂದ ತಂದೆಯ ಬಳಿ ಕಲಿಮಾ(ಇಸ್ಲಾಮಿಕ್‌ ಶ್ಲೋಕ) ಹೇಳುವಂತೆ ಸೂಚಿಸಿದ. ತಂದೆ ನನಗೆ ತಿಳಿದಿಲ್ಲ ಎಂದು ಹೇಳಿದ ಕೂಡಲೇ ಕಿವಿ, ತಲೆ, ಬೆನ್ನಿಗೆ ಮೂರು ಗುಂಡು ಹಾರಿಸಿ ಹತ್ಯೆ ಮಾಡಿದರು ಎಂದು ವಿವರಿಸಿದರು.

ಕಲಿಮಾ ಅಂದ್ರೆ ಏನು?
ಕಲಿಮಾ ಅಥವಾ ಶಹದಾ ಅನ್ನೋದು ನಂಬಿಕೆಯ ಇಸ್ಲಾಮಿಕ್ (Islamic) ಘೋಷಣೆ. ಇದು ಇಸ್ಲಾಂ ನಂಬಿಕೆಯ ಐದು ಸ್ತಂಭಗಳಲ್ಲಿ ಒಂದೆಂದು ನಂಬುತ್ತಾರೆ. ಇದನ್ನು ಪ್ರಾಮಾಣಿಕವಾಗಿ ಪಠಿಸಿದವರು ಮುಸ್ಲಿಂ ಅನುಯಾಯಿಗಳಾಗುತ್ತಾರೆ, ಅವರು ಇಸ್ಲಾಂ ಧರ್ಮದ ಮಡಿಲಿಗೆ ಬರುತ್ತಾರೆ ಅನ್ನೋದು ನಂಬಿಕೆ. ಆದ್ದರಿಂದಲೇ ಪ್ರವಾಸಿಗರಿಗೆ ಗುಂಡು ಹಾರಿಸುವುದಕ್ಕೂ ಮುನ್ನ ಕಲಿಮಾ ಪಠಿಸುವಂತೆ ಒತ್ತಾಯಿಸಿದ್ದಾರೆ.

Share This Article