ನಾವು ಭಯೋತ್ಪಾದನೆಯನ್ನು ಬೆಂಬಲಿಸಿದ್ದೇವೆ – ಒಪ್ಪಿಕೊಂಡ ಪಾಕಿಸ್ತಾನ

Public TV
3 Min Read

ಲಂಡನ್‌: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನರಮೇಧ (Pahalgam Terror Attack ) ಮಾಡಿದ ಬೆನ್ನಲ್ಲೇ ನಾವು ಭಯೋತ್ಪಾದನಾ ಸಂಘಟನೆಯನ್ನು (Terror Outfits) ಬೆಂಬಲಿಸಿದ್ದೇವೆ ಎಂದು ಪಾಕಿಸ್ತಾನ ಅಧಿಕೃತವಾಗಿ ಹೇಳಿದೆ.

ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ (Khawaja Asif) ಅವರು ಭಯೋತ್ಪಾದಕ ಗುಂಪುಗಳಿಗೆ ಹಣಕಾಸು ಒದಗಿಸುವುದು ಮತ್ತು ಬೆಂಬಲಿಸುವುದು ಸೇರಿದಂತೆ ಭಯೋತ್ಪಾದನೆಯನ್ನು ಉತ್ತೇಜಿಸುವಲ್ಲಿ ಪಾಕಿಸ್ತಾನದ ಭಾಗಿಯಾಗಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಸ್ಕೈ ನ್ಯೂಸ್ ಪ್ರಶ್ನೆಗೆ, ನಾವು ಸುಮಾರು 3 ದಶಕಗಳಿಂದ ಅಮೆರಿಕ ಮತ್ತು ಬ್ರಿಟನ್ ಸೇರಿದಂತೆ ಪಶ್ಚಿಮ ದೇಶಗಳಿಗಾಗಿ ಈ ಕೊಳಕು ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

ನಾವು ತಪ್ಪು ಮಾಡಿದ್ದೇವೆ. ಈ ಕೆಲಸದಿಂದ ನಾವು ಸಂಕಷ್ಟ ಅನುಭವಿಸಿದ್ದೇವೆ. ನಾವು ಸೋವಿಯತ್ ಒಕ್ಕೂಟದ ವಿರುದ್ಧದ ಯುದ್ಧದಲ್ಲಿ ಮತ್ತು ನಂತರ 9/11 ರ ನಂತರದ ಯುದ್ಧದಲ್ಲಿ ಸೇರದಿದ್ದರೆ ಪಾಕಿಸ್ತಾನದ ಮೇಲೆ ಈ ಆರೋಪ ಬರುತ್ತಿರಲಿಲ್ಲ ಎಂದು ತಿಳಿಸಿದರು. ಅಷ್ಟೇ ಅಲ್ಲದೇ ಪಹಲ್ಗಾಮ್‌ ಘಟನೆಯ ನಂತರ ಭಾರತದೊಂದಿಗೆ ಸಂಪೂರ್ಣ ಯುದ್ಧ ನಡೆಸುವ ಸಾಧ್ಯತೆಯಿದೆ. ಭಾರತದ ಪ್ರತಿಕ್ರಿಯೆ ಸರಿಯಾದ ಪ್ರತಿಕ್ರಿಯೆಯನ್ನು ನಾವು ನೀಡುತ್ತೇವೆ ಎಂದು ಆಸಿಫ್ ತಿಳಿಸಿದರು.

ಪಾಕ್‌ ಉಗ್ರರ ತಾಣವಾಗಿದ್ದು ಹೇಗೆ?
ಎರಡನೇ ವಿಶ್ವಯುದ್ಧದ ಬಳಿಕ ಅಮೆರಿಕ ಮತ್ತು ಸೋವಿಯತ್‌ ಯೂನಿನ್‌ ಮಧ್ಯೆ ಶೀತಲ ಸಮರ ಆರಂಭವಾಗಿತ್ತು. ಏಷ್ಯಾದಲ್ಲಿ ಅಫ್ಘಾನಿಸ್ತಾನ (Afghanistan) ಸೋವಿಯತ್‌ ಯೂನಿಯನ್‌ ಜೊತೆ ಉತ್ತಮ ಸಂಬಂಧ ಹೊಂದಿತ್ತು. ಸೋವಿಯತ್‌ ಯೂನಿಯನ್‌ (Soviet Union) ಆರ್ಥಿಕ, ಮಿಲಿಟರಿ, ಸಹಕಾರವನ್ನು ನೀಡಿತ್ತು. ಶೀತಲ ಸಮರದ ಸಮಯದಲ್ಲಿ ಅಫ್ಘಾನ್‌- ಯುಎಸ್‌ಎಸ್‌ಆರ್‌ ಸಂಬಂಧ ಉತ್ತಮವಾಗುತ್ತಿರುವುದನ್ನು ಸಹಿಸದ ಅಮೆರಿಕ (America) ಪಾಕಿಸ್ತಾನದಲ್ಲಿ ಮುಜಾಹಿದ್ದೀನ್‌ಗಳ ಕೈಗೆ ಶಸ್ತ್ರಾಸ್ತ್ರ ನೀಡಿ ಅವರನ್ನು ಬೆಳೆಸತೊಡಗಿತು. ಅಮೆರಿಕದ ಆಮಿಷಕ್ಕೆ ಪಾಕ್‌ ನಾಯಕರು, ಸೇನಾಧಿಕಾರಿಗಳು ಬಲಿಯಾಗಿ ಸಾಥ್‌ ನೀಡಿದರು.

ಈ ನಿರ್ಧಾರದಿಂದ ಅಮೆರಿಕಕ್ಕೆ ಎರಡು ಲಾಭವಿತ್ತು. ಒಂದನೇಯದಾಗಿ ಅಮೆರಿಕದ ಸೈನಿಕರು ಅಫ್ಘಾನಿಸ್ತಾನಕ್ಕೆ ಹೋಗಿ ನೇರವಾಗಿ ಯುದ್ಧ ಮಾಡದ ಕಾರಣ ಸೈನಿಕರ ಸಾವು, ನೋವು ಆಗುವುದಿಲ್ಲ. ಎರಡನೇಯದಾಗಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪವೂ ಬರುವುದಿಲ್ಲ. ಅಮೆರಿಕ ಕೃಪಾಪೋಷಿತ ಉಗ್ರರು ಸೋವಿಯತ್‌ ಸೈನಿಕರ ಮೇಲೆ ದಾಳಿ ನಡೆಸುತ್ತಿದ್ದರು. ಗೆರಿಲ್ಲಾ ಯುದ್ಧಗಳನ್ನು ಮಾಡಲು ಆರಂಭಿಸಿದರು. ಕೊನೆಗೆ 1989 ರಲ್ಲಿ ಸೋವಿಯತ್‌ ಯೂನಿಯನ್‌ ಅಫ್ಘಾನಿಸ್ತಾನದಲ್ಲಿದ್ದ ಎಲ್ಲ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿತು. 1991ರಲ್ಲಿ ಯುಎಸ್‌ಎಸ್‌ಆರ್‌ ಛಿದ್ರಗೊಳ್ಳುವ ಮೂಲಕ ಅಮೆರಿಕದ ತಂತ್ರ ಯಶಸ್ವಿಯಾಯಿತು.

ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಅಲ್‌ ಕೈದಾ ಉಗ್ರರು ದಾಳಿ ನಡೆಸಿದ ಬಳಿಕ ಅಮೆರಿಕ ಅಫ್ಘಾನಿಸ್ತಾನ ತಾಲಿಬಾನ್‌ ಮೇಲೆ ಯುದ್ಧ ಸಾರಿತು. ಈ ಯುದ್ಧದ ಸಮಯದಲ್ಲೂ ಅಮೆರಿಕಕ್ಕೆ ಪಾಕ್‌ ನೆರವು ನೀಡಿತ್ತು. ಅಫ್ಘಾನಿಸ್ತಾನ ಭೂಮಿಯಿಂದ ಅವೃತವಾದ ದೇಶವಾಗಿದ್ದ ಕಾರಣ ಅಮೆರಿಕ ಪಾಕಿಸ್ತಾನದ ಮೂಲಕ ತನ್ನ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿತ್ತು. ಅಮೆರಿಕದ ಹಡಗುಗಳು ಕರಾಚಿ ಬಂದರಿಗೆ ಬಂದು ಅಲ್ಲಿಂದ ನೆಲ ಮಾರ್ಗದ ಮೂಲಕ ಶಸ್ತ್ರಾಸ್ತ್ರಗಳನ್ನು ಅಫ್ಘಾನಿಸ್ತಾನದಲ್ಲಿರುವ ಮಿಲಿಟರಿ ಕ್ಯಾಂಪ್‌ಗಳಿಗೆ ಸಾಗಿಸುತ್ತಿತ್ತು. ತನ್ನ ವಿರುದ್ಧದ ಯುದ್ಧಕ್ಕೆ ಪಾಕಿಸ್ತಾನ ಅಮೆರಿಕಕ್ಕೆ ಸಹಾಯ ನೀಡಿದ್ದು ತಾಲಿಬಾನ್‌ ಸಿಟ್ಟಿಗೆ ಮತ್ತೊಂದು ಕಾರಣವಾಗಿದ್ದು ಈಗ ತಾಲಿಬಾನ್‌ ಉಗ್ರರು ಮತ್ತು ಪಾಕ್‌ ಸೇನೆ ಪರಸ್ಪರ ದಾಳಿ ನಡೆಸುತ್ತಿದೆ.

Share This Article