ಪಾಕಿಸ್ತಾನದ ಬುಡಕ್ಕೆ `ಜಲ’ಬಾಂಬ್ ಹಾಕಿದ ಭಾರತ!

Public TV
3 Min Read

– 2 ಡ್ಯಾಂನ ಎಲ್ಲಾ ಗೇಟ್‌ ಬಂದ್‌
– ಚೆನಾಬ್‌ ನದಿಗೆ ನೀರು ಹರಿಸುವುದನ್ನು ನಿಲ್ಲಿಸಿದ ಭಾರತ
– ಮೊದಲ ಬಾರಿಗೆ ನದಿಯನ್ನು ದಾಟುತ್ತಿದ್ದಾರೆ ಜನ

ಶ್ರೀನಗರ: ಪಹಲ್ಗಾಮ್‌ ಭೀಕರ ನರಮೇಧಕ್ಕೆ (Pahalgam Terror Attack) ಪ್ರತಿಯಾಗಿ ಭಾರತ ಈಗ ಪಾಕಿಸ್ತಾನದ ಬುಡಕ್ಕೆ `ಜಲ’ಬಾಂಬ್ ಹಾಕಿದೆ. ಸಿಂಧೂ ನದಿಯ (Sindhu River) ಒಪ್ಪಂದವನ್ನು ಭಾರತ ಅಮಾನತಿನಲ್ಲಿಟ್ಟ ಬೆನ್ನಲ್ಲೇ ಚೆನಾಬ್ ನದಿಗೆ (Chenab river) ಜಲಾಶಯಗಳಿಂದ ನೀರು ಹರಿಸುವುದನ್ನೇ ನಿಲ್ಲಿಸಿದೆ.

ಚೆನಾಬ್ ನದಿಗೆ ಅಡ್ಡಲಾಗಿ ರಾಮಬನದಲ್ಲಿ ಬಾಗ್ಲಿಹಾರ್ ಮತ್ತು ರಿಯಾಸಿಯಲ್ಲಿ ಸಲಾಲ್ ಜಲವಿದ್ಯುತ್ ಅಣೆಕಟ್ಟುಗಳನ್ನು ನಿರ್ಮಾಣ ಮಾಡಲಾಗಿದೆ. ಈಗ ಈ ಎರಡು ಅಣೆಕಟ್ಟಿನಿಂದ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಝೀಲಂ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಿಶನ್‌ಗಂಗಾ ಅಣೆಕಟ್ಟಿನಿಂದಲೂ ನೀರು ಹರಿಸುವುದನ್ನು ನಿಲ್ಲಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಮಾಧ್ಯಮಕ್ಕೆ ಸ್ಥಳೀಯ ವ್ಯಕ್ತಿ ದಿನೇಶ್‌ ಪ್ರತಿಕ್ರಿಯಿಸಿ, ಸರ್ಕಾರ ಪಾಕಿಸ್ತಾನಕ್ಕೆ ನೀರು ಹರಿಯುವುದನ್ನು ನಿಲ್ಲಿಸಿದ್ದಕ್ಕೆ ನಮಗೆ ಸಂತೋಷವಾಗಿದೆ. ಪಾಕಿಸ್ತಾನದ ಪಹಲ್ಗಾಮ್‌ನಲ್ಲಿ ಅವರು ನಮ್ಮ ಪ್ರವಾಸಿಗರನ್ನು ಕೊಂದ ರೀತಿಗೆ ಸೂಕ್ತ ಉತ್ತರ ನೀಡಬೇಕು. ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರದಲ್ಲಿ ನಾವು ಅದರೊಂದಿಗಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ದೊಡ್ಡ ದುರಂತ ತಪ್ಪಿಸಿದ ಭಾರತೀಯ ಸೇನೆ – 5 ಜೀವಂತ ಬಾಂಬ್ ವಶಕ್ಕೆ

ಕೆಲವು ದಿನಗಳ ಹಿಂದೆ ಬಗ್ಲಿಹಾರ್ ಜಲಾಶಯ ಮೇಲ್ಭಾಗದಲ್ಲಿ ಭಾರಿ ಮಳೆಯಾಗಿದ್ದರಿಂದ ನೀರು ಹರಿಸಲು ಗೇಟ್‌ ತಗೆಯಲಾಗಿತ್ತು. ಇದರಿಂದ ತಗ್ಗು ಪ್ರದೇಶವಾಗಿರುವ ರಿಯಾಸಿ ಮತ್ತು ಅಖ್ನೂರ್‌ನ ತಗ್ಗು ಪ್ರದೇಶಗಳಲ್ಲಿ ಪ್ರವಾಹ ನಿರ್ಮಾಣವಾಗಿತ್ತು. ಪಾಕಿಸ್ತಾನದಲ್ಲೂ ಸ್ವಲ್ಪ ಸಮಸ್ಯೆಯಾಗಿತ್ತು. ಇದನ್ನೂ ಓದಿ: ಯುದ್ಧ ಕಾರ್ಮೋಡದ ನಡುವೆ BSFಗೆ ಇನ್ನಷ್ಟು ಬಲ – 16 ಹೊಸ ಬೆಟಾಲಿಯನ್ ಸೇರ್ಪಡೆ?

ಇಂದು ಬೆಳಗ್ಗೆ ಬಾಗ್ಲಿಹಾರ್ ಅಣೆಕಟ್ಟಿನ ಗೇಟ್‌ಗಳನ್ನು ಮುಚ್ಚಿದ್ದರಿಂದ ನೀರಿನ ಹರಿವು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇದರೊಂದಿಗೆ ರಾಮಬನ್‌ನಲ್ಲಿರುವ ಚೆನಾಬ್ ನದಿ ಪಾತ್ರ ಮತ್ತು ಜಲಾಶಯದ ಕೆಳಭಾಗದ ಸಂಪೂರ್ಣವಾಗಿ ಬತ್ತಿ ಹೋದಂತೆ ಕಾಣುತ್ತಿದೆ.

ರಿಯಾಸಿಯಲ್ಲಿರುವ ಸಲಾಲ್ ಅಣೆಕಟ್ಟಿನಿಂದ ನೀರಿನ ಹರಿವು ಕಡಿಮೆಯಾಗಿದೆ ಮತ್ತು ಅಖ್ನೂರ್ ಮತ್ತು ಜೌರಿಯನ್‌ನಲ್ಲಿ ನೀರಿನ ಮಟ್ಟವೂ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದಾಗಿ ಪಾಕಿಸ್ತಾನದಲ್ಲಿ ನೀರಿನ ಬಿಕ್ಕಟ್ಟನ್ನು ಉಲ್ಬಣಗೊಳ್ಳುವ ಸಾಧ್ಯತೆಯಿದೆ.

ಅಖ್ನೂರ್ ಪ್ರದೇಶದಲ್ಲಿ ನೀರಿನ ಮಟ್ಟ ಭಾರೀ ಇಳಿಕೆಯಾಗಿದ್ದು ಜನರು ಮೊದಲ ಬಾರಿಗೆ ನದಿಯನ್ನು ದಾಟುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Share This Article