ಶ್ರೀನಗರ: ಪಹಲ್ಗಾಮ್ ದಾಳಿ (Pahalgam Attac) ಬಳಿಕ ಆಫ್ ಆಗಿದ್ದ ಸ್ಯಾಟಲೈಟ್ ಫೋನ್‌ಗಳು 2 ದಿನದ ಹಿಂದೆ ಅಕ್ಟಿವ್ ಆಗಿದ್ದು, ಉಗ್ರರನ್ನು ಬೇಟೆಯಾಡಲು ಸೇನೆಗೆ ಸಹಕಾರಿಯಾಗಿದೆ ಎಂಬ ವಿಷಯ ತಿಳಿದುಬಂದಿದೆ.
ಪಹಲ್ಗಾಮ್ ದಾಳಿ ಬಳಿಕ ಸ್ಯಾಟ್‌ಲೈಟ್ ಫೋನ್‌ಗಳ ಮೇಲೆ ಸೇನೆ ನಿಗಾ ಇಟ್ಟಿತ್ತು. ಉಗ್ರರ ದಾಳಿ ಬಳಿಕ ಸುಮಾರು ಎರಡು ತಿಂಗಳಿಂದ ನಿಷ್ಕ್ರಿಯಗೊಂಡಿದ್ದ ಸ್ಯಾಟ್‌ಲೈಟ್ ಫೋನ್‌ಗಳು ಆನ್ ಆಗಿದ್ದು, `ಆಪರೇಷನ್ ಮಹದೇವ್ʼ (Operation Mahade) ಕಾರ್ಯಾಚರಣೆಗೆ ಕಾರಣವಾಯಿತು ಎಂದು ಸೇನೆಯ ಉನ್ನತ ಮೂಲಗಳು ತಿಳಿಸಿವೆ.
ಫೋನ್ ಟ್ರ್ಯಾಕ್ ಮಾಡಿದಾಗ ಡಚಿಗಮ್‌ನಲ್ಲಿ (Dachigam Encounter) ಸ್ಯಾಟಲೈಟ್ ಫೋನ್ ಬಳಕೆಯಾಗಿರುವುದು ತಿಳಿದು ಬಂದಿತ್ತು. ಆದರೆ ಅಲ್ಲಿ ಯಾವ ಜನವಸತಿ ಇಲ್ಲ. ಅನುಮಾನಾಸ್ಪದ ಕರೆಯಿಂದ ಸೇನೆ ಕಾರ್ಯಾಚರಣೆಗೆ ಮುಂದಾಯಿತು. ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಹತ್ಯೆ ಮಾಡಲಾಗಿದೆ. ಹತ್ಯೆಯಾದ ಒಬ್ಬ ಉಗ್ರನನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಾಶಿಮ್ ಮೂಸಾ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: Operation Mahadev | ಪಹಲ್ಗಾಮ್ ನರಮೇಧಕ್ಕೆ ಕಾರಣವಾಗಿದ್ದ ಪ್ರಮುಖ ಉಗ್ರ ಯೋಧರ ಗುಂಡಿಗೆ ಬಲಿ
ಹಾಶಿಮ್ ಮೂಸಾ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾಗೆ ಸೇರಿದವನು ಎಂಬ ಅನುಮಾನ ಇದೆ. ಉಳಿದಂತೆ ಹತ್ಯೆಯಾದ ಉಗ್ರರನ್ನು ಇನ್ನೂ ಗುರುತಿಸಲಾಗಿಲ್ಲ. ಮೃತದೇಹಗಳನ್ನು ಕೆಳಗೆ ತರಲು ಸಮಯ ತೆಗೆದುಕೊಳ್ಳುತ್ತದೆ. ಹತ್ಯೆಗೀಡಾದ ಭಯೋತ್ಪಾದಕರ ಗುರುತುಗಳನ್ನು ಖಚಿತಪಡಿಸಿಕೊಳ್ಳಲು ಡ್ರೋನ್ ಬಳಕೆ ಮಾಡಲಾಗುತ್ತಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಈ ಹಿಂದೆ ಬಂಧಿಸಿದ್ದ ಪರ್ವೇಜ್ ಮತ್ತು ಬಶೀರ್ ಅಹ್ಮದ್ ಎಂದು ಗುರುತಿಸಲಾದ ಇಬ್ಬರು, ಪಹಲ್ಗಾಮ್ ದಾಳಿಯಲ್ಲಿ ಮೂವರು ಪಾಕಿಸ್ತಾನಿ ಲಷ್ಕರ್ ಭಯೋತ್ಪಾದಕರು ಭಾಗಿಯಾಗಿದ್ದಾರೆ ಎಂದು ವಿಚಾರಣೆ ವೇಳೆ ತಿಳಿಸಿದ್ದರು. ಇವರಿಗೆ ಹತ್ಯೆಯಾದ ಉಗ್ರರ ಫೋಟೋ ತೋರಿಸಿ ಮಾಹಿತಿ ಪಡೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರು ಹುವಾವೇ ಉಪಗ್ರಹ ಫೋನ್ ಬಳಸಿದ್ದರು. ದಾಳಿಯ ನಂತರ ಆ ಸಾಧನವನ್ನು ಬಳಸಲಾಗಿಲ್ಲ ಎಂದು ತಿಳಿದು ಬಂದಿದೆ. ಇದನ್ನೂ ಓದಿ: Operation MAHADEV | ಪಹಲ್ಗಾಮ್ ದಾಳಿಯ ಮೂವರು ಶಂಕಿತ ಉಗ್ರರನ್ನು ಹತ್ಯೆಗೈದ ಸೇನೆ