‘ಪಡ್ಡೆ ಹುಲಿ’ ಏಪ್ರಿಲ್ 19ರಂದು ರಿಲೀಸ್

Public TV
1 Min Read

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಜನಪ್ರಿಯ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಪಾದಾರ್ಪಣೆ ಮಾಡುತ್ತಿರುವ ಚಿತ್ರ `ಪಡ್ಡೆ ಹುಲಿ’ ಅನೇಕ ವಿಶೇಷತೆಗಳನ್ನು ತುಂಬಿಕೊಂಡು ಈ ವಾರ ಬಿಡುಗಡೆ ಆಗುತ್ತಿದೆ.

‘ಪಡ್ಡೆ ಹುಲಿ’ ಚಿತ್ರದ ನಿರ್ಮಾಪಕ ಎಂ.ರಮೇಶ್ ರೆಡ್ಡಿ (ನಂಗ್ಲಿ). ತೇಜಸ್ವಿನಿ ಎಂಟರ್‍ಪ್ರೈಸಸ್ ಅಡಿಯಲ್ಲಿ ಈ ಚಿತ್ರವನ್ನು ನಿರ್ದೇಶನ ಮಾಡಿರುವವರು ಗುರು ದೇಶಪಾಂಡೆ. ಶ್ರೇಯಸ್ ಪ್ರಥಮ ಹೆಜ್ಜೆಗೆ ಡಾ.ವಿಷ್ಣುವರ್ಧನ ಅವರ ನೆರಳು ಇದೆ. ಚಿತ್ರವನ್ನು ಚಿತ್ರದುರ್ಗದ ಹಿನ್ನೆಲೆಯಲ್ಲಿ ಡಾ.ವಿಷ್ಣುವರ್ಧನ್ ಅವರನ್ನು ನೆನಪಿಸುವ ಹಾಗೆ ಕಥೆ ಮಾಡಲಾಗಿದೆ. ನಿಶ್ವಿಕ ನಾಯ್ಡು ಚಿತ್ರದ ಕಥಾ ನಾಯಕಿ. ವಿ ರವಿಚಂದ್ರನ್ ನಾಯಕ ಶ್ರೇಯಸ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅತಿಥಿ ಪಾತ್ರಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ರಕ್ಷಿತ್ ಶೆಟ್ಟಿ ಅಭಿನಯಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಸುಧಾರಾಣಿ, ಮಧುಸೂಧನ್, ರಂಜಿತ್, ಚಿಕ್ಕಣ್ಣ, ಧರ್ಮಣ್ಣ ಹಾಗೂ ಇತರರು ಇದ್ದಾರೆ.

ಪಡ್ಡೆ ಹುಲಿ ಚಿತ್ರದ ಪ್ರಮುಖ ಅಂಶಗಳೆಂದರೆ ಹಳೆಯ ಹಾಡುಗಳನ್ನು ಮರುಸಂಯೋಜನೆ ಮಾಡಲಾಗಿದೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಈ ಚಿತ್ರದಲ್ಲಿ ಬಸವಣ್ಣ ಅವರ ಕಳಬೇಡ…ಕೊಲಬೇಡ…ಹುಸಿಯ ನುಡಿಯಲೂ ಬೇಡ…, ಬಿ.ಆರ್.ಲಕ್ಷ್ಮಣ್ ರಾವ್ ಅವರ `ಹೇಳಿ ಹೋಗು ಕಾರಣ…, ಜಿ ಪಿ ರಾಜರತ್ನಂ ಅವರ `ಹೆಂಡ ಹೆಂಡ್ತಿ ಕನ್ನಡ ಪದಗೊಳ್ ಅಂದ್ರೆ ರತ್ನಂಗ್ ಪ್ರಾಣ…, ಡಿವಿಜಿ ಅವರ `ಬದುಕು ಜಟಕಾ ಬಂಡಿ…ವಿಧಿ ಅದರ ಸಾಹೇಬ…, ಕೆ.ಎಸ್.ನರಸಿಂಹ ಸ್ವಾಮಿ ಅವರ `ನಿನ್ನ ಪ್ರೇಮದ ಪರಿಯ ನಾನಾರಿಯೆ ಕನಕಾಂಗಿ ಹಾಡುಗಳನ್ನು ಮರು ಸಂಯೋಜನೆ ಮಾಡಿ ಹಾಡಿಸಲಾಗಿದೆ. ಇಷ್ಟೇ ಅಲ್ಲದೆ ಇನ್ನೂ ಐದು ಹಾಡುಗಳಿಗೆ ಅಜನಿಷ್ ಲೋಕನಾಥ್ ಸ್ವರ ಸಂಯೋಜನೆ ಮಾಡಿದ್ದಾರೆ. ಡಾ.ವಿ.ನಾಗೇಂದ್ರ ಪ್ರಸಾದ್ ಗೀತ ಸಾಹಿತ್ಯ ಸಹ ಇದೆ. ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ಡಿಫರೆಂಟ್ ಡ್ಯಾನಿ ಹಾಗೂ ವಿನೋದ್ ಸಾಹಸ, ಮದನ್ ಹರಿಣಿ, ವಿ.ಮುರಳಿ, ಕಲೈ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕೆ ಇದೆ.

Share This Article
Leave a Comment

Leave a Reply

Your email address will not be published. Required fields are marked *