ಶ್ವಾನ ಪ್ರಿಯರಿಗೆ ಶಾಕಿಂಗ್ ನ್ಯೂಸ್ – ಸಾಕು ನಾಯಿ ಕಚ್ಚಿದ್ರೆ ಜೈಲು ಗ್ಯಾರಂಟಿ

Public TV
2 Min Read

ಗಾಂಧಿನಗರ: ಶ್ವಾನ ಪ್ರಿಯರಿಗೆ ಶಾಕಿಂಗ್ ನ್ಯೂಸ್. ಒಂದಕ್ಕಿಂತ ಹೆಚ್ಚು ಬಾರಿ ಸಾಕು ನಾಯಿ ಸಾರ್ವಜನಿಕರನ್ನು ಕಚ್ಚಿದ್ದರೆ ನಾಯಿಯ ಯಜಮಾನ ಜೈಲು ವಾಸ ಅನುಭವಿಸಬೇಕಾಗುತ್ತದೆ.

ಗುಜರಾತ್‍ನ ಘೋದಸಾರ್ ನಿವಾಸಿ ಭಾರೇಶ್ ಪಾಂಡ್ಯಾ ಸಾಕಿದ ನಾಯಿ ನೆರೆಹೊರೆಯ ನಾಲ್ವರು ಮಂದಿಗೆ ಕಚ್ಚಿತ್ತು. ಇದೀಗ ಪಾಂಡ್ಯಾನಿಗೆ ಸ್ಥಳೀಯ ಕೋರ್ಟ್ ಒಂದು ವರ್ಷ ಕಠಿಣ ಕಾರಾಗ್ರಹವಾಸ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. 2014 ರಿಂದ ವಾದ ವಿವಾದ ಆಲಿಸಿದ ನ್ಯಾಯಾಲಯವು ಶ್ವಾನ ಸಾಕಿದ ಮಾಲೀಕನ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ನೇರವಾಗಿ ಭಾಗಿಯಾಗದಿದ್ದರೂ ನಾಯಿಯ ಮಾಲೀಕನ ಬೇಜವಾಬ್ದಾರಿ ವರ್ತನೆ ಶಿಕ್ಷೆಗೆ ಅರ್ಹ ಎಂಬ ನಿರ್ಧಾರಕ್ಕೆ ಬಂದಿದೆ.

ಅಪರಾಧಿ ಪಾಂಡ್ಯಾನಿಗೆ ಐಪಿಸಿ ಸೆಕ್ಷನ್ 338ರ ಅನ್ವಯ ಎರಡು ವರ್ಷ ಕಠಿಣ ಶಿಕ್ಷೆ ವಿಧಿಸಬೇಕು ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಅಭಿಪ್ರಾಯ ತಿಳಿಸಿತ್ತು. ಸಾಕು ಪ್ರಾಣಿಗಳನ್ನು ಸಾಕಲು ಮತ್ತು ಅವುಗಳನ್ನು ನಿಯಂತ್ರಿಸಲು ಪ್ರಾಣಿಪ್ರಿಯರು ಬೇಜವಾಬ್ದಾರಿ ತೋರುವವರಿಗೆ ಈ ಪ್ರಕರಣ ಒಂದು ಉದಾಹರಣೆಯಾಗುತ್ತದೆ ಎಂಬ ಉದ್ದೇಶದಿಂದ ಕೋರ್ಟ್ ಅಪರಾಧಿಗೆ ಶಿಕ್ಷೆ ವಿಧಿಸಿದೆ.

ಏನಿದು ಪ್ರಕರಣ?
2012 ಮತ್ತು 2014ರ ನಡುವೆ ಘೋಡಾಸರ್ ನಲ್ಲಿನ ಆಶಾಪುರಿ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಪಾಂಡ್ಯಾ ಒಂದು ಡಾಬರ್ ಮ್ಯಾನ್ ನಾಯಿಯನ್ನು ಸಾಕಿದ್ದನು. ಅದಕ್ಕೆ ಶಕ್ತಿ ಎಂದು ಹೆಸರಿಟ್ಟಿದ್ದನು. ಈ ನಾಯಿ ಅಕ್ಕಪಕ್ಕದ ಮನೆಯವರ ನಾಲ್ವರಿಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿತ್ತು. ಕಚ್ಚಿಸಿಕೊಂಡವರಲ್ಲಿ ಮೂವರು ಮಕ್ಕಳಿದ್ದು ಯುವಕ ಅವಿನಾಶ್ ಪಾಟೀಲ್‍ಗೆ ಕಚ್ಚಿಗಾಯಗೊಳಿಸಿತ್ತು. ಈತ ಮಾಲೀಕನ ವಿರುದ್ಧ ದೂರು ದಾಖಲಿಸಿದ್ದನು.

ನಾಯಿಯ ದಾಳಿಯಿಂದಾಗಿ ನನ್ನ ಮೂಳೆಗಳು ಮುರಿದಿವೆ ಎಂದು ಆರೋಪಿಸಿ 2014ರ ಫೆಬ್ರವರಿಯಲ್ಲಿ ಇಸನ್‍ಪುರ ಪೊಲೀಸ್ ಠಾಣೆಯಲ್ಲಿ ಪಾಟೀಲ್ ದೂರು ದಾಖಲಿಸಿದ್ದನು. ಇತರರ ಪ್ರಾಣಕ್ಕೆ ಅಪಾಯವನ್ನುಂಟುಮಾಡಿದ ಕಾರಣಕ್ಕಾಗಿ ಪ್ರಕರಣ ದಾಖಲಾಗಿತ್ತು. ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಯು.ಎನ್ ಸಿಂಧಿ ಅವರು ಈ ಪ್ರಕರಣ ಕುರಿತು ಕೋರ್ಟಿನಲ್ಲಿ ವಾದ ಮಂಡಿಸಿದ್ದರು. ಕೊನೆಗೆ ಪಾಂಡ್ಯ ಅಪರಾಧಿ ಎಂಬುದು ಕೋರ್ಟಿನಲ್ಲಿ ಸಾಬೀತಾಯಿತು. ಪಾಂಡ್ಯಾ ಕೋರ್ಟಿನಲ್ಲಿ ಮನವಿ ಮಾಡಿಕೊಂಡಿದ್ದನು. ಆದರೆ ನ್ಯಾಯಾಲಯವು ಆತನ ಮನವಿಯನ್ನು ನಿರಾಕರಿಸಿ ಒಂದು ವರ್ಷದ ಜೈಲು ಶಿಕ್ಷೆ ಮತ್ತು 1,500 ರೂ. ದಂಡ ವಿಧಿಸಿ ಆದೇಶ ಪ್ರಕಟಿಸಿದೆ.

Share This Article
Leave a Comment

Leave a Reply

Your email address will not be published. Required fields are marked *