ಮುಂಬೈ-ನಾಗ್ಪುರ ಸಮೃದ್ಧಿ ಹೆದ್ದಾರಿಯಲ್ಲಿ 50ಕ್ಕೂ ಹೆಚ್ಚು ವಾಹನ ಪಂಕ್ಚರ್‌!

Public TV
1 Min Read

ಮುಂಬೈ: ಮಹಾರಾಷ್ಟ್ರದ ಮುಂಬೈ-ನಾಗ್ಪುರ ಸಮೃದ್ಧಿ ಹೆದ್ದಾರಿಯಲ್ಲಿ (Mumbai Nagpur Highway) 50ಕ್ಕೂ ಹೆಚ್ಚು ವಾಹನಗಳು ಪಂಕ್ಚರ್ ಆಗಿ, ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ.

ಡಿ.29 ರಂದು ವಾಶಿಮ್ ಜಿಲ್ಲೆಯ ಮಲೆಗಾಂವ್ ಮತ್ತು ವನೋಜಾ ಟೋಲ್ ಪ್ಲಾಜಾ ನಡುವೆ ರಾತ್ರಿ 10 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ. ರಸ್ತೆಯಲ್ಲಿ ಬಿದ್ದಿದ್ದ ಕಬ್ಬಿಣದ ಬೋರ್ಡ್ ಮೇಲೆ ಹಾದುಹೋದ ಕಾರುಗಳು ಮತ್ತು ಸರಕು ಸಾಗಾಣಿಕೆ ಟ್ರಕ್‌ಗಳು ಪಂಕ್ಚರ್‌ ಆಗಿವೆ. ಇದರಿಂದ ಹೆದ್ದಾರಿಯಲ್ಲಿ ಕೆಲವು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದಲ್ಲದೆ, ಬಹಳ ಸಮಯದಿಂದ ಯಾವುದೇ ನೆರವು ಸಿಗದೆ ಪ್ರಯಾಣಿಕರು ರಾತ್ರಿಯಿಡೀ ಹೆದ್ದಾರಿಯಲ್ಲಿ ಪರದಾಡಿದ್ದಾರೆ.

ಆಕಸ್ಮಿಕವಾಗಿ ಬೋರ್ಡ್ ಬಿದ್ದಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಯಾರಾದರೂ ಎಸೆದಿದ್ದಾರಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಹೈಸ್ಪೀಡ್ ಕಾರಿಡಾರ್‌ನಲ್ಲಿ ಪ್ರಯಾಣದ ಸುರಕ್ಷತೆ ಬಗ್ಗೆ ಚರ್ಚೆಯಾಗುತ್ತಿರುವ ಸಮಯದಲ್ಲಿ ಈ ಘಟನೆ ನಡೆದಿದೆ. ಇನ್ನೂ ಜೂನ್‌ನಲ್ಲಿ ಜಲ್ನಾ ಜಿಲ್ಲೆಯ ಕಡ್ವಾಂಚಿ ಗ್ರಾಮದ ಬಳಿಯ ಸಮೃದ್ಧಿ ಹೆದ್ದಾರಿಯಲ್ಲಿ (Samruddhi Highway) ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ ಆರು ಜನರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿದ್ದರು.

ಸಮೃದ್ಧಿ ಮಹಾಮಾರ್ಗ ಮಹಾರಾಷ್ಟ್ರದ 701-ಕಿಮೀ ಉದ್ದದ ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ಆಗಿದೆ. ಇದು ಮುಂಬೈ ಮತ್ತು ನಾಗ್ಪುರವನ್ನು ಸಂಪರ್ಕಿಸುವ ದೇಶದ ಅತಿ ಉದ್ದದ ಗ್ರೀನ್‌ಫೀಲ್ಡ್ ರಸ್ತೆ ಯೋಜನೆಗಳಲ್ಲಿ ಒಂದಾಗಿದ್ದು, 55,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

Share This Article