ನೈಜೀರಿಯಾ: ಇಲ್ಲಿನ ಶಾಲೆಯೊಂದರಲ್ಲಿ 315 ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಬಂಧಿಸಿರುವ ಘಟನೆ ನಡೆದಿದೆ. ಒಂದೇ ವಾರದಲ್ಲಿ ಇದು 2 ಕಿಡ್ನ್ಯಾಪ್ ಕೇಸ್ ಆಗಿದೆ.
ನೆರೆಯ ಕೆಬ್ಬಿ ರಾಜ್ಯದ ಮಾಧ್ಯಮಿಕ ಶಾಲೆಗೆ ಸೋಮವಾರ ಬಂದೂಕುಧಾರಿಗಳು ನುಗ್ಗಿ 25 ಬಾಲಕಿಯರನ್ನು ಅಪಹರಿಸಿದ್ದರು. ಅದರ ಬೆನ್ನಲ್ಲೇ ಮಧ್ಯ ನೈಜೀರಿಯಾದ ನೈಜರ್ ರಾಜ್ಯದಲ್ಲಿರುವ ಸೇಂಟ್ ಮೇರಿಸ್ ಸಹ-ಶಿಕ್ಷಣ ಶಾಲೆಯ ಮೇಲೆ ಶುಕ್ರವಾರ ಮುಂಜಾನೆ ದಾಳಿ ನಡೆಸಿ ಮಕ್ಕಳು, ಶಿಕ್ಷಕರನ್ನು ಕಿಡ್ನ್ಯಾಪ್ ಮಾಡಿದ್ದಾರೆ.
303 ವಿದ್ಯಾರ್ಥಿಗಳು ಹಾಗೂ 12 ಮಂದಿ ಶಿಕ್ಷಕರನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ನೈಜೀರಿಯಾದ ಕ್ರಿಶ್ಚಿಯನ್ ಅಸೋಸಿಯೇಷನ್ ತಿಳಿಸಿದೆ. ಸೇಂಟ್ ಮೇರಿಸ್ ಶಾಲೆಯಲ್ಲಿ ಸುಮಾರು 629 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರಲ್ಲಿ ಅರ್ಧದಷ್ಟು ಮಂದಿ ಅಪಹರಣಕ್ಕೊಳಗಾಗಿದ್ದಾರೆ.
ಅಪಹರಿಸಲ್ಪಟ್ಟ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಂಖ್ಯೆಯ ಬಗ್ಗೆ ನೈಜೀರಿಯಾ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹತ್ತಿರದ ರಾಜ್ಯಗಳಾದ ಕಟ್ಸಿನಾ ಮತ್ತು ಪ್ಲಾಟೋದಲ್ಲಿನ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಶಾಲೆಗಳನ್ನು ಮುಚ್ಚಲು ಆದೇಶಿಸಿದ್ದಾರೆ.
ಒಂದು ದಶಕದ ಹಿಂದೆ ಈಶಾನ್ಯ ಬೊರ್ನೊ ರಾಜ್ಯದ ಚಿಬೋಕ್‌ನಲ್ಲಿ ಬೊಕೊ ಹರಾಮ್ ಜಿಹಾದಿಗಳು ಸುಮಾರು 300 ಹುಡುಗಿಯರನ್ನು ಅಪಹರಿಸಿದ್ದರು. ಆ ಘಟನೆಯಿಂದ ನೈಜೀರಿಯಾ ಇನ್ನೂ ಕಂಗಾಲಾಗಿದೆ. ಆ ಹುಡುಗಿಯರಲ್ಲಿ ಕೆಲವರು ಇನ್ನೂ ಪತ್ತೆಯಾಗಿಲ್ಲ.

