ಇರಾನ್‍ನಲ್ಲಿ 250ಕ್ಕೂ ಹೆಚ್ಚು ಭಾರತೀಯರಿಗೆ ಕೊರೊನಾ

Public TV
2 Min Read

ನವದೆಹಲಿ: ಇರಾನ್‍ನಲ್ಲಿ 250ಕ್ಕೂ ಹೆಚ್ಚು ಭಾರತೀಯರಿಗೆ ಕೊರೊನಾ ವೈರಸ್ ತಗುಲಿರುವುದು ವೈದ್ಯಕೀಯ ಪರೀಕ್ಷೆ ದೃಢಪಟ್ಟಿದೆ ಎಂದು ಭಾರತದಿಂದ ಹೋದ ವೈದ್ಯರ ತಂಡವು ತಿಳಿಸಿದೆ.

ಇರಾನ್‍ಗೆ ತೆರಳಿದ್ದ ಕಾರ್ಗಿಲ್‍ನ 250 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟು 800 ಮಂದಿಯ ಭಾರತೀಯ ನಿಯೋಗ ಇರಾನ್‍ಗೆ ತೆರಳಿತ್ತು. ಎಲ್ಲರೂ ಕೊರೊನಾ ಪೀಡಿತ ಇರಾನ್‍ನ ಖಾಮ್ ಎಂಬಲ್ಲಿದ್ದು, ಭಾರತೀಯರ ಚಿಕಿತ್ಸೆಗೆ ಇರಾನ್ ವೈದ್ಯರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮಂಗ್ಳೂರು ಏರ್‌ಪೋರ್ಟಿಗೆ ದುಬೈನಿಂದ ಬಂದ ವ್ಯಕ್ತಿಗೆ ಕೊರೊನಾ

ಇರಾನ್‍ನ ಖಾಮ್‍ನಲ್ಲಿರುವ ಹೋಟೆಲ್ ಹಾಗೂ ವಸತಿ ಸೌಕರ್ಯ ಇರುವಲ್ಲಿ ಭಾರತೀಯರು ಸಿಲುಕಿಕೊಂಡಿದ್ದಾರೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬಳಿಕ ಭಾರತಕ್ಕೆ ಕರೆತರಲು ಭಾರತ ಸರ್ಕಾರವು ಪುಣೆಯ ವೈದ್ಯರ ತಂಡವನ್ನು ಕಳುಹಿಸಿದೆ.

ಕೊರೊನಾ ವೈರಸ್ ಇಲ್ಲದೆ ಇರುವ ವ್ಯಕ್ತಿಗಳನ್ನು ವೈದ್ಯರು ಬ್ಯಾಚ್‍ಗಳನ್ನು ಮಾಡಿ ಕಳೆದ ವಾರದಿಂದ 200ಕ್ಕೂ ಹೆಚ್ಚು ಭಾರತೀಯರನ್ನು ಭಾರತಕ್ಕೆ ಕಳುಹಿಸಿದ್ದಾರೆ. ಅವರಲ್ಲಿ ಹೆಚ್ಚಿನವರು ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳು ಇರಾನ್‍ನ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಓದುತ್ತಿರುವವರೇ ಆಗಿದ್ದಾರೆ.

ಇರಾನ್‍ನಲ್ಲಿ ಸೋಂಕಿತ ಭಾರತೀಯರಲ್ಲಿ ಅವರ ಸಂಬಂಧಿಕರು ಸೇರಿದ್ದಾರೆ. ಇರಾನ್ ಸರ್ಕಾರದ ನಿರ್ಲಕ್ಷ್ಯದಿಂದಾಗಿಯೇ ಬಿಕ್ಕಟ್ಟು ಉಲ್ಬಣಗೊಳಿಸಿದೆ ಎಂದು ಕಾರ್ಗಿಲ್‍ನ ವಕೀಲ ಹಾಜಿ ಮುಸ್ತಫಾ ಆರೋಪಿಸಿದ್ದಾರೆ.

ಇರಾನ್‍ನಲ್ಲಿ 700ಕ್ಕೂ ಹೆಚ್ಚು ಜನರು ಕೊರೊನಾ ವೈರಸ್‍ಗೆ ಬಲಿಯಾಗಿದ್ದು, ಸುಮಾರು 14,000 ಪ್ರಕರಣಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್, ಒಟ್ಟು 234 ಭಾರತೀಯರನ್ನು ಇರಾನ್‍ನಿಂದ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇಟಲಿಯಲ್ಲಿ ನಿನ್ನೆ ಒಂದೇ ದಿನ 349 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 2,158 ದಾಟಿದೆ. ಕಳೆದ ನಾಲ್ಕು ದಿನಗಳಲ್ಲಿ ಮೃತರ ಸಂಖ್ಯೆ ಡಬಲ್ ಆಗಿದೆ. ಮುಂದಿನ 15 ದಿನಗಳ ಕಾಲ ಮನೆಯಿಂದ ಯಾರು ಹೊರಗೆ ಬರಬಾರದು ಎಂದು ಫ್ರಾನ್ಸ್ ಸರ್ಕಾರ ಆದೇಶ ನೀಡಿದೆ.

ಯುರೋಪ್‍ನ ಬಹುತೇಕ ದೇಶಗಳು ಪ್ರಜೆಗಳಿಗೆ ನಿರ್ಬಂಧ ಹೇರಿದೆ. ಸ್ಪೇನ್‍ನಲ್ಲಿ ಸೋಂಕಿತರ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆ ಆಗುತ್ತಿದೆ. 10 ಸಾವಿರ ಮಂದಿಗೆ ಸೋಂಕು ತಗುಲಿದೆ. 350 ಮಂದಿ ಬಲಿ ಆಗಿದ್ದಾರೆ. ಅಮೆರಿಕದಲ್ಲಿ 90ಕ್ಕೂ ಹೆಚ್ಚು ಮಂದಿ ಬಲಿ ಆಗಿದ್ದು, ಸೋಂಕಿತರ ಸಂಖ್ಯೆ 5 ಸಾವಿರ ದಾಟಿದೆ. ಪಾಕಿಸ್ತಾನದಲ್ಲಿ ಕೊರೊನಾಗೆ ಒಬ್ಬರು ಬಲಿಯಾಗಿದ್ದು, ಸೋಂಕಿತರ ಸಂಖ್ಯೆ ಇನ್ನೂರು ದಾಟಿದೆ.

ಕೊರೊನಾ ದೇಶವನ್ನು ಆರ್ಥಿಕ ದುಸ್ಥಿತಿಗೆ ತಳ್ಳಬಹುದು ಎಂಬ ಆತಂಕವನ್ನು ಟ್ರಂಪ್ ಹೊರಹಾಕಿದ್ದಾರೆ. ರಷ್ಯಾದಲ್ಲಿ ಸೋಂಕಿತರ ಸಂಖ್ಯೆ 100 ದಾಟಿದೆ. ರಷ್ಯಾ, ಚಿಲಿ, ಉಕ್ರೇನ್, ಪೆರು ದೇಶಗಳು ವಿದೇಶಿಯರಿಗೆ ಪ್ರವೇಶ ನಿರಾಕರಿಸುತ್ತಿದ್ದಾರೆ. ಆಫ್ರಿಕಾ ಖಂಡದ ಹಲವು ದೇಶಗಳಲ್ಲಿ ಸೋಂಕಿತರು ಕಂಡುಬರುತ್ತಿದ್ದಾರೆ. ಚೀನಾದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಆದರೆ ವಿದೇಶಿಯರಿಂದ ಸೋಂಕು ಹಬ್ಬಬಹುದು ಎಂಬ ಭಯದಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಭದ್ರತಾ ಮಂಡಳಿಗೆ ಸಂಬಂಧಿಸಿದ ಎಲ್ಲಾ ಸಭೆಗಳನ್ನು ರದ್ದು ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *