ಬೆಂಗಳೂರು: ಅಪರಿಚಿತ ವ್ಯಕ್ತಿಯ ಶವದ ಮೇಲೆ ಸುಮಾರು 150 ಹೆಚ್ಚು ವಾಹನಗಳು ಸಂಚರಿಸಿರುವ ಭೀಕರ ಅಪಘಾತ ಮಡಿವಾಳ ಬಳಿ ಇರುವ ಬಿಎಟಿಪಿಎಲ್ ಎಲಿವೇಟೆಡ್ ಫ್ಲೈಓವರ್ ಮೇಲೆ ನಡೆದಿದೆ.
ಅಪರಿಚಿತ ವ್ಯಕ್ತಿಯೊಬ್ಬರಿಗೆ ಇಂದು ನಸುಕಿನ ಜಾವ ಸುಮಾರು 3 ಗಂಟೆಗೆ ವಾಹನವೊಂದು ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಆದರೆ ಈ ವೇಳೆಯಲ್ಲಿ ಅಪಘಾತವಾಗಿರುವುದು ಯಾರಿಗೂ ತಿಳಿದ ಕಾರಣ ವಾಹನಗಳು ಶವದ ಮೇಲೆ ಹರಿದು ಹೋಗಿವೆ.
ಬೆಳಗ್ಗೆ ಸಂಚಾರಿ ಪೊಲೀಸರು ಗಮನಿಸಿದ್ದು, ನಂತರ ಬಂದು ನೋಡಿದ್ದಾರೆ. ಆದರೆ ಅಷ್ಟರಲ್ಲಿ ಸುಮಾರು 150 ವಾಹನಗಳು ಹರಿದು ಹೋಗಿರುವುದರಿಂದ ವ್ಯಕ್ತಿಯ ಗುರುತು ಪತ್ತೆ ಹಚ್ಚುವುದು ಕಷ್ಟವಾಗಿದೆ. ನಂತರ ಪೊಲೀಸರು ಆಂಬುಲೆನ್ಸ್‍ಗೆ ಕರೆ ಮಾಡಿ ಸಮೀಪದ ಆಸ್ಪತ್ರೆಗೆ ಶವವನ್ನು ರವಾನಿಸಿದ್ದಾರೆ.
ಮಡಿವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸರಿಯಾದ ಟೋಲ್ ಪೆಟ್ರೋಲಿಂಗ್ ಇಲ್ಲದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಆರೋಪಿಸುತ್ತಿದ್ದಾರೆ. ಆದರೆ ಮೃತಪಟ್ಟಿರುವ ವ್ಯಕ್ತಿ ಯಾರು ಇನ್ನು ತಿಳಿದು ಬಂದಿಲ್ಲ.
ಇದನ್ನೂ ಓದಿ: ದ್ವಿಚಕ್ರ ವಾಹನಸವಾರರಿಗೆ ಶಾಕಿಂಗ್ ಸುದ್ದಿ – ಹೊಸೂರು ಫ್ಲೈಓವರ್ ನಲ್ಲಿ ಓಡಾಟ ಶೀಘ್ರದಲ್ಲೇ ಬಂದ್ ಸಾಧ್ಯತೆ