ಇಂದಿರಾ ಗಾಂಧಿ ಮುಕ್ತ ವಿವಿ ಪರೀಕ್ಷೆ ಬರೆದ 100ಕ್ಕೂ ಹೆಚ್ಚು ನಕ್ಸಲರು!

Public TV
1 Min Read

ಭುವನೇಶ್ವರ: ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲು ಇಚ್ಛಿಸಿರುವ 100 ಕ್ಕೂ ಅಧಿಕ ನಕ್ಸಲರು ಪೊಲೀಸರಿಗೆ ಶರಣಾಗಿ ತಮ್ಮ ಶಿಕ್ಷಣ ಮುಂದುವರಿಸಲು ಇಂದಿರಾ ಗಾಂಧಿ ಮುಕ್ತ ವಿವಿ (ಇಗ್ನೋ) ನಡೆಸುವ ಪರೀಕ್ಷೆಯನ್ನು ಬರೆದಿದ್ದಾರೆ.

ಇವರೆಗೂ ಒಡಿಸ್ಸಾದಲ್ಲಿ 120ಕ್ಕೂ ಅಧಿಕ ನಕ್ಸಲರು ಪೊಲೀಸರಿಗೆ ಶರಣಾಗಿದ್ದು, ಅದರಲ್ಲಿ 107 ಮಂದಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಜೂನ್ 21 ರಂದು ನಡೆದಿದ್ದು, ಬ್ಯಾಚುಲರ್ ಪ್ರಿಪರೇಟರಿ ಯೋಜನೆ (ಬಿಬಿಪಿ) ಅಡಿಯಲ್ಲಿ ಎಲ್ಲರಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಈ ಪರೀಕ್ಷೆಯಲ್ಲಿ ಅವರು ಉತ್ತೀರ್ಣರಾದರೆ ಪದವಿಗೆ ಸೇರಲು ಅರ್ಹತೆ ಪಡೆಯುತ್ತಾರೆ ಎಂದು ಪರೀಕ್ಷಾ ಅಧಿಕಾರಿಗಳು ತಿಳಿಸಿದ್ದಾರೆ.

ಯುವ ಜನತೆ ಉತ್ತಮ ಜೀವನ ರೂಪಿಸಿಕೊಳ್ಳಲು ಅವಕಾಶ ನೀಡುವ ಉದ್ದೇಶಕ್ಕಾಗಿ ಜಿಲ್ಲಾ ಆಡಳಿತವೇ ಅಭ್ಯರ್ಥಿಗಳ ಪರೀಕ್ಷಾ ವೆಚ್ಚವನ್ನು ಪಾವತಿಸಿತ್ತು. ಪರೀಕ್ಷೆ ಎದುರಿಸಿದ ಯುವಕ ಈ ವೇಳೆ ಪ್ರತಿಕ್ರಿಯೆ ನೀಡಿದ್ದು, ತಾವು ಸಮಾಜದ ಒಂದು ಭಾಗವಾಗಿರಲು ಇಚ್ಛಿಸುತ್ತೇವೆ. ಅದ್ದರಿಂದಲೇ ಪರೀಕ್ಷೆ ಬರೆಯುತ್ತಿದ್ದೇವೆ ಎಂದು ತಿಳಿಸಿದರು.

ಛತ್ತೀಸ್‍ಗಢ ಹಾಗೂ ಒಡಿಶಾ ರಾಜ್ಯಗಳಲ್ಲಿ ನಕ್ಸಲ್ ಸಮಸ್ಯೆ ಹೆಚ್ಚಾಗಿದ್ದು, ಇತ್ತೀಚಿಗೆ ಹಲವರು ಪೊಲೀಸರಿಗೆ ಶರಣಾಗಿ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗಿದ್ದರು. ಸದ್ಯ ಇವರಿಗೆ ಪುನರ್ ವಸತಿ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಪೂರಕ ಯೋಜನೆಗಳನ್ನು ರೂಪಿಸಿದೆ. ಆದರೆ ಕಳೆದ ಕೆಲ ದಿನಗಳ ಹಿಂದೆ ಛತ್ತೀಸ್‍ಗಢದ ಸುಕ್ಮಾ ಪ್ರದೇಶದಲ್ಲಿ ಸಿಆರ್ ಪಿಎಫ್ ಯೋಧರ ವಾಹನವನ್ನ ನಕ್ಸಲರು ಬಾಂಬ್ ಇಟ್ಟು ಸ್ಫೋಟಿಸಿದ್ದರು. ಈ ವೇಳೆ 9 ಯೋಧರು ಮೃತಪಟ್ಟಿದ್ದರು. ಈ ಘಟನೆ ಬಳಿಕ ಕೇಂದ್ರ ಸರ್ಕಾರ ನಕ್ಸಲ್ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *