ಜೂನ್ 27 ರಂದು ಬಿಡುಗಡೆಗೆ ಸಿದ್ಧವಾಗಿರುವ ಬಾಲಿವುಡ್ನ ಸರ್ದಾರ್ ಜಿ 3 (Sardaar Ji 3) ಸಿನಿಮಾವನ್ನು ಬಹಿಷ್ಕರಿಸಬೇಕು ಅಂತ ಆಗ್ರಹ ಕೇಳಿ ಬಂದಿದೆ. ಬಾಲಿವುಡ್ ಹಾಗೂ ಪಂಜಾಬಿ ಚಿತ್ರರಂಗದ ಹೆಸರಾಂತ ಗಾಯಕ ಮತ್ತು ನಟರಾಗಿ ಗುರುತಿಸಿಕೊಂಡಿರುವ ದಿಲ್ಜಿತ್ ದೋಸಂಜ್ (Diljit Dosanjh) ನಟನೆಯ ಸಿನಿಮಾ ಇದಾಗಿದ್ದು, ಈ ಸಿನಿಮಾದಲ್ಲಿ ಪಾಕಿಸ್ತಾನಿ ನಟಿಯೊಬ್ಬರು ನಾಯಕಿಯಾಗಿ ನಟಿಸಿದ್ದಾರೆ. ಹಾಗಾಗಿ ಈ ಸಿನಿಮಾ ರಿಲೀಸ್ ಮಾಡಬಾರದು ಅಂತ ಒತ್ತಡವೂ ಕೇಳಿ ಬಂದಿದೆ.
ಪಹಲ್ಗಾಮ್ ಘಟನೆಯ ನಂತರ ಪಾಕಿಸ್ತಾನಿ ಕಲಾವಿದರಿಗೆ ಅವಕಾಶ ನೀಡಬಾರದು ಅನ್ನುವ ಕೂಗು ಕೇಳಿ ಬಂದಿತ್ತು. ಪಾಕಿಸ್ತಾನವನ್ನು ಬೆಂಬಲಿಸುವ ರಾಷ್ಟ್ರಗಳ ಬಗ್ಗೆಯೂ ಕನಿಕರ ಇಟ್ಟುಕೊಳ್ಳದಂತೆ ಕರೆ ನೀಡಲಾಗಿತ್ತು. ಇದೀಗ ಸರ್ದಾರ್ ಜಿ 3 ಸಿನಿಮಾದಲ್ಲಿ ಪಾಕಿಸ್ತಾನಿ ನಟಿ ಹನಿಯಾ ಆಮಿರ್ (Hania Aamir) ನಾಯಕಿಯಾಗಿ ನಟಿಸಿದ್ದಾರೆ. ಪಹಲ್ಗಾಮ್ ಘಟನೆಗಿಂತ ಮುಂಚೆಯೇ ಈ ಸಿನಿಮಾ ತಯಾರಾಗಿದೆ ಅನ್ನೋದು ಚಿತ್ರತಂಡದ ಮಾತು.
ಈಗಾಗಲೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಚಿತ್ರತಂಡ ಪ್ರಮೋಷನ್ ಕೂಡ ಮಾಡುತ್ತಿದೆ. ಈ ವೇಳೆ ಸಿನಿಮಾದ ಬಗ್ಗೆ ಅಪಸ್ವರ ಕೇಳಿ ಬಂದಿದೆ. ಪಾಕಿಸ್ತಾನವನ್ನು ಬೆಂಬಲಿಸುವ ನಟಿಯು ಚಿತ್ರದಲ್ಲಿ ಇರುವುದರಿಂದ, ಚಿತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡಬಾರದು ಅಂತ ಕೆಲವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.