– ಹೆಚ್‌ಎಎಲ್ ಸಂಚಾರ ಠಾಣಾ ವ್ಯಾಪ್ತಿಯ ಕೆಲ ರಸ್ತೆಗಳಲ್ಲಿ ನಿರ್ಬಂಧ
ಬೆಂಗಳೂರು: ನಗರದ ರಸ್ತೆ ಗುಂಡಿ ವಿಚಾರ ರಾಷ್ಟ್ರಮಟ್ಟದಲ್ಲಿ ಭಾರೀ ಚರ್ಚೆಯಾದ ಬೆನ್ನಲ್ಲೇ ಒಂದು ವಾರ ಕಾಲ ಔಟರ್ ರಿಂಗ್ ರೋಡ್‌ನಲ್ಲಿ (ORR) ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಹೆಚ್‌ಎಎಲ್ ಏರ್‌ಪೋರ್ಟ್ (HAL Airport) ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹೊರ ವರ್ತುಲ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ (Traffic Problem) ಮತ್ತು ಸಂಚಾರದಟ್ಟಣೆ ಸುಧಾರಿಸಲು ಕೆಲವೊಂದು ರಸ್ತೆಗಳಲ್ಲಿ ನಾಳೆಯಿಂದ ಸೆ.26ರವರಗೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ವಾಹನ ನಿರ್ಬಂಧಿಸಲಾದ ರಸ್ತೆ ಮಾರ್ಗ
ಲೇ ಅರೇಬಿಯಾ, ಬಿರಿಯಾನಿ ಜೋನ್ ಮತ್ತು ಕ್ರೋಮ್ ಜಂಕ್ಷನ್ ಬಳಿ ಹೊರವರ್ತುಲ ರಸ್ತೆಯಿಂದ ಮಾರತ್ತಹಳ್ಳಿ-ಕಾಡುಬೀಸನಹಳ್ಳಿ ಸರ್ವಿಸ್ ರಸ್ತೆಗೆ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ ಯಾವುದು?
ಮಹದೇವಪುರ ಕಾರ್ತಿಕ್‌ನಗರ ಕಡೆಯಿಂದ ಲೇ ಅರೇಬಿಯಾ ಮತ್ತು ಬಿರಿಯಾನಿ ಪಾಯಿಂಟ್ ಮೂಲಕ ಮಾರತ್ ಹಳ್ಳಿ- ಕಾಡುಬೀಸನಹಳ್ಳಿ ಸರ್ವಿಸ್ ರಸ್ತೆಗೆ ಸಂಚರಿಸುವ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ವಾಹನ ಸವಾರರು ಕಡ್ಡಾಯವಾಗಿ ಕಲಾಮಂದಿರದ ಬಳಿ ಸರ್ವಿಸ್ ರಸ್ತೆಗೆ ತೆರಳಿ ಮಾರತ್ ಹಳ್ಳಿ ಕಾಂತಿ ಸ್ವೀಟ್ಸ್ ಅಂಡರ್‌ಪಾಸ್ ಬಳಿ ಯು-ಟರ್ನ್ ತೆಗೆದುಕೊಂಡು, ಮಾರತ್ ಹಳ್ಳಿ ಸೇತುವೆಯ ಬಳಿ ಎಡಕ್ಕೆ ತಿರುಗಿ ಮುನ್ನೇಕೊಳಾಲ, ಕಾಡುಬೀಸನಹಳ್ಳಿ ಜಂಕ್ಷನ್, ಪಣತ್ತೂರು ಮತ್ತು ಕರಿಯಮ್ಮನ ಅಗ್ರಹಾರ ಕಡೆಗೆ ಹೋಗಲು ಸರ್ವಿಸ್ ರಸ್ತೆಯಲ್ಲಿ ಸಂಚರಿಸುವುದು.
ದೇವರಬೀಸನಹಳ್ಳಿ ಹಾಗೂ ಬೆಳ್ಳಂದೂರು ಕಡೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳು ಕಡ್ಡಾಯವಾಗಿ ಹೊರ ವರ್ತುಲ ರಸ್ತೆಯ ಮೂಲಕವೇ ಸಂಚರಿಸಬೇಕಾಗುತ್ತದೆ.