ನವದೆಹಲಿ: ಅತ್ಯಾಚಾರ ಆರೋಪಿಯೊಬ್ಬ ಜಾಮೀನಿನ ಮೇಲೆ ಜೈಲಿಂದ ಹೊರಗೆ ಬಂದು ಸಂತ್ರಸ್ತೆಯ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ದೆಹಲಿಯಲ್ಲಿ (Delhi) ನಡೆದಿದೆ.
ಅಬುಜೈರ್ ಶಫಿ (30) ಎಂಬಾತನ ವಿರುದ್ಧ ಗುಂಡಿನ ದಾಳಿಗೊಳಗಾದ ಮಹಿಳೆ ಕಳೆದ ವರ್ಷ ನಗರದ ವಸಂತ ವಿಹಾರ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಆತನನ್ನು ಪೊಲೀಸರು ಬಂಧಿಸಿದ್ದರು. ಇತ್ತೀಚೆಗೆ ಆತ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಬಳಿಕ ಸಂತ್ರಸ್ತೆಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದ. ಆದರೆ ಮಹಿಳೆ ಆತನೊಂದಿಗೆ ಮಾತನಾಡಲು ನಿರಾಕರಿಸಿದ್ದಳು ಇದೇ ಕಾರಣಕ್ಕೆ ಆತ ಹಾಗೂ ಆತನ ಸಹಚರರು ಮಹಿಳೆಯ ಮೇಲೆ ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್‌ಗೆ ಶಿಕ್ಷೆ ಬೆನ್ನಲ್ಲೇ ಪೆನ್‌ಡ್ರೈವ್ ಹಂಚಿದವರಿಗೆ ಶುರುವಾಯ್ತು ನಡುಕ!
ಗುಂಡೇಟಿನಿಂದ ಮಹಿಳೆಯ ಎದೆಗೆ ಗಾಯವಾಗಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ. ಮಹಿಳೆಯ ಹೇಳಿಕೆ ಆಧರಿಸಿ, ಅಬುಜೈರ್ ಶಫಿ ಮತ್ತು ಅವನ ಸಹಚರ ಅಮನ್ ಶುಕ್ಲಾನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪೊಲೀಸರು, ಮಹಿಳೆ ಆಟೋದಲ್ಲಿ ತೆರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ಆರೋಪಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ಸಂಬಂಧ ಆರೋಪಿಗಳ ವಿರುದ್ಧ ವಸಂತ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 109(1) (ಕೊಲೆ ಯತ್ನ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮನೆಗೆಲಸದಾಕೆ ಮೇಲೆ ಅತ್ಯಾಚಾರ ಕೇಸ್ – ಅಪರಾಧಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ