Article 370 Verdict: J&K, ಲಡಾಖ್‌ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ – ಅಮಿತ್‌ ಶಾ ಸಂತಸ

Public TV
2 Min Read

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ (Jammu And Kashmir) ಸಂವಿಧಾನದ 370ನೇ ವಿಧಿಯ (Article 370) ಅಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಕೇಂದ್ರ ಸರ್ಕಾರ ನಿರ್ಧಾರ ಸರಿಯಾಗಿದೆ ಎಂದು ಸುಪ್ರೀಂ ಕೋರ್ಟ್ (Supreme Court) ಐತಿಹಾಸಿಕ ತೀರ್ಪು ನೀಡಿದೆ. ಸುಪ್ರೀಂ ತೀರ್ಪನ್ನು ಕೇಂದ್ರ ಸಚಿವ ಅಮಿತ್‌ ಶಾ ಶ್ಲಾಘಿಸಿದ್ದಾರೆ.

ಜಮ್ಮು‍ & ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಕೇಂದ್ರ ಸಚಿವ ಅಮಿತ್‌ ಶಾ (Amit Shah) ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆರ್ಟಿಕಲ್‌ 370 ರದ್ದತಿ ನಿರ್ಧಾರವನ್ನು ಎತ್ತಿಹಿಡಿದ ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್‌ ತೀರ್ಪನ್ನು ನಾನು ಸ್ವಾಗತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: Article 370 Verdict – ಇಂದಿನ ತೀರ್ಪು ಕೇವಲ ತೀರ್ಪಲ್ಲ, ಭರವಸೆಯ ದಾರಿದೀಪ: ಮೋದಿ ಸಂತಸ

2019ರ ಆಗಸ್ಟ್‌ 5 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆರ್ಟಿಕಲ್‌ 370 ಅನ್ನು ರದ್ದುಗೊಳಿಸುವ ದೂರದೃಷ್ಟಿಯ ನಿರ್ಧಾರವನ್ನು ತೆಗೆದುಕೊಂಡಿತು. ಅಲ್ಲಿಂದೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮತ್ತು ಸಹಜತೆ ನೆಲೆಸಿತು. ಹಿಂಸಾಚಾರದಿಂದಲೇ ನಲುಗಿದ್ದ ಕಣಿವೆ ಪ್ರದೇಶದಲ್ಲಿ ಆದ ಬೆಳವಣಿಗೆ ಮತ್ತು ಅಭಿವೃದ್ಧಿಯು ಮಾನವ ಜೀವನಕ್ಕೆ ಹೊಸ ಅರ್ಥ ತಂದಿತು. ಕೃಷಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿನ ಸಮೃದ್ಧಿಯು ಜಮ್ಮು ಮತ್ತು ಕಾಶ್ಮೀರ, ಲಡಾಖ್ ನಿವಾಸಿಗಳ ಆದಾಯ ಮಟ್ಟ ಹೆಚ್ಚಿಸಿತು. ಇಂದು ಸುಪ್ರೀಂ ಕೋರ್ಟ್‌ 370ನೇ ವಿಧಿಯನ್ನು ರದ್ದುಗೊಳಿಸುವ ತೀರ್ಪು ಪ್ರಕಟಿಸಿದ್ದು ಭಾರತದ ಸಂಸತ್ತು ತೆಗೆದುಕೊಂಡ ನಿರ್ಧಾರ ಸಾಂವಿಧಾನಿಕವಾಗಿದೆ ಎಂದು ಸಾಬೀತುಪಡಿಸಿದೆ ಎಂದು #NayaJammuKashmir (ಹೊಸ ಜಮ್ಮುಕಾಶ್ಮೀರ) ಹ್ಯಾಶ್‌ಟ್ಯಾಗ್‌ನೊಂದಿಗೆ ಬರೆದುಕೊಂಡಿದ್ದಾರೆ.

ಆರ್ಟಿಕಲ್‌ 370 ರದ್ದಾದ ನಂತರ ಬಡವರು ಹಾಗೂ ವಂಚಿತರ ಹಕ್ಕುಗಳನ್ನು ಪುನರ್‌ಸ್ಥಾಪಿಸಲಾಗಿದೆ. ಇಡೀ ಪ್ರದೇಶವೂ ಸಂಗೀತ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮದಿಂದ ಪ್ರತಿಧ್ವನಿಸುತ್ತಿದೆ. ಭಾರತದೊಂದಿಗೆ ಇಲ್ಲಿನ ಏಕತೆ, ಸಮಗ್ರತೆಯನ್ನು ಬಲಪಡಿಸಲಾಗಿದೆ. ಈ ತೀರ್ಪು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಯಾವಾಗಲೂ ನಮ್ಮ ರಾಷ್ಟ್ರಕ್ಕೆ ಸೇರಿದ್ದು ಎಂಬುದನ್ನು ಸೂಚಿಸಿದ್ದು, ಹೀಗೆ ಮುಂದುವರಿಯಲಿದೆ. ಇದನ್ನೂ ಓದಿ: Article 370 Verdict – ಕೇಂದ್ರದ ಎಲ್ಲಾ ನಿರ್ಧಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ: ಸುಪ್ರೀಂ ಐತಿಹಾಸಿಕ ತೀರ್ಪಿನಲ್ಲಿ ಏನಿದೆ?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಮ್ಮ ಸರ್ಕಾರವು J&K ಮತ್ತು ಲಡಾಖ್‌ನಲ್ಲಿ ಶಾಶ್ವತವಾಗಿ ಶಾಂತಿ ಸ್ಥಾಪಿಸಲು ಮತ್ತು ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿದೆ. ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ಹೊಸ ಪ್ರೋತ್ಸಾಹಗಳೊಂದಿಗೆ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ಸಿಗಲಿದೆ. ಅತ್ಯಾಧುನಿಕ ಶೈಕ್ಷಣಿಕ ಮೂಲಸೌಕರ್ಯ ನಿರ್ಮಿಸಲಾಗುತ್ತದೆ. ಜೊತೆಗೆ ಬಡವರ ಸಬಲೀಕರಣಕ್ಕಾಗಿ ಎಲ್ಲಾ ರೀತಿಯ ಶಕ್ತಿಯನ್ನು ಬಳಸುತ್ತೇವೆ ಎಂದು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಯುವ ಆಟಗಾರ್ತಿ 1.3 ಕೋಟಿಗೆ ಸೇಲ್‌ – ಇತಿಹಾಸ ನಿರ್ಮಿಸಿದ ವೃಂದಾ ದಿನೇಶ್‌

Share This Article