ಬಲ್ಡೋಟಾ ಕಾರ್ಖಾನೆ ನಿರ್ಮಾಣಕ್ಕೆ ವಿರೋಧ – ಮಾ.4ಕ್ಕೆ ಕೊಪ್ಪಳದ ಸರ್ವಪಕ್ಷಗಳ ನಿಯೋಗದಿಂದ ಸಿಎಂ ಭೇಟಿ

Public TV
2 Min Read

ಕೊಪ್ಪಳ: ಜಿಲ್ಲೆಯಲ್ಲಿ ಬಲ್ಡೋಟಾ ಕಾರ್ಖಾನೆ ಆರಂಭಕ್ಕೆ ವಿರೋಧ ವ್ಯಕ್ತವಾಗಿದೆ. ನಾಳೆ (ಮಾ.04) ಕೊಪ್ಪಳದ ಸರ್ವಪಕ್ಷಗಳ ನಿಯೋಗ ಸಿಎಂ ಸಿದ್ದರಾಮಯ್ಯರನ್ನು (CM Siddaramaiah) ಭೇಟಿ ಮಾಡಲಿದ್ದಾರೆ.

ಬಲ್ಡೋಟಾ ಕಾರ್ಖಾನೆ ಆರಂಭಕ್ಕೆ ವಿರೋಧ ವ್ಯಕ್ತವಾಗಿದ್ದರೂ ಕೂಡ ಸದ್ದಿಲ್ಲದೇ ಪ್ಲಾಂಟ್ ನಿರ್ಮಾಣಕ್ಕೆ ಸಂಸ್ಥೆ ಭೂಮಿ ಪೂಜೆ ನೆರವೇರಿಸಿದೆ. ಈ ನಡುವೆ ಉದ್ದೇಶಿತ ಸ್ಥಳದಲ್ಲಿ ಪ್ಲ್ಯಾಂಟ್ ನಿರ್ಮಾಣ ವಿರೋಧಿಸಿ ಕೊಪ್ಪಳದ ಸರ್ವಪಕ್ಷಗಳ ನಿಯೋಗ ನಾಳೆ ಮುಖ್ಯಮಂತ್ರಿಯನ್ನು ಮಾಡಲಿದ್ದು, ಸಿಎಂ ಭೇಟಿ ಮತ್ತು ಸಭೆಯ ಫಲಿತಾಂಶ ಕೊಪ್ಪಳ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.ಇದನ್ನೂ ಓದಿ: ಐಐಟಿ ಬಾಬಾ ಜೈಪುರದಲ್ಲಿ ಅರೆಸ್ಟ್‌

ಫೆ.24ರಂದು ನಡೆದ ಕೊಪ್ಪಳ ಬಂದ್‌ನಲ್ಲಿ ಗಮಿಮಠದ ಶ್ರೀಗಳು ಜಿಲ್ಲೆಯ ಜನಪ್ರತಿನಿಧಿಗಳಿಗೆ ವಾರ್ನಿಂಗ್ ಮಾಡಿದ್ದರು. ಯಾವುದೇ ಕಾರಣಕ್ಕೂ ಕೊಪ್ಪಳದಲ್ಲಿ ಸ್ಟೀಲ್ ಪ್ಲ್ಯಾಂಟ್ ವಿಸ್ತರಣೆ ಆಗಬಾರದು, ಅದನ್ನ ತಡೆಯುವ ಜವಾಬ್ದಾರಿ ಪಕ್ಷಾತೀತವಾಗಿ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಜೊತೆ ಮಾತನಾಡಿ ವಾಪಸ್ ಪಡೆದುಕೊಳ್ಳುವಂತೆ ಒತ್ತಡ ಹಾಕಬೇಕಾಗಿದೆ.

ಇದರ ಬೆನ್ನಲ್ಲೇ ಬಲ್ಡೋಟಾ ಕಂಪನಿ ಭೂಮಿ ಪೂಜೆ ನೆರವೇರಿಸಿದೆ. ಹೀಗಾಗಿ ಸದ್ಯ ಜನಪ್ರತಿನಿಧಿಗಳು ಸಿಎಂ ಜೊತೆ ಪಕ್ಷಾತೀತವಾಗಿ ಬಲ್ಡೋಟಾ ಕಾರ್ಖಾನೆ ರದ್ದು ಮಾಡುವಂತೆ ಮನವಿ ಮಾಡಲು ಮುಂದಾಗಿದ್ದಾರೆ. ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿರುವ ಅಭಿನವ ಗವಿಶ್ರೀಗಳು ಅನುಷ್ಠಾನಕ್ಕೆ ಕುಳಿತ ಹಿನ್ನೆಲೆ ಯಾರೊಂದಿಗೂ ಸಂಪರ್ಕಕ್ಕೆ ಸಿಕ್ಕಿಲ್ಲ, ಭಾನುವಾರ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಬಂದಾಗಲು ಸಹ ಸ್ವಾಮೀಜಿ ದರ್ಶನ ನೀಡಿಲ್ಲ.

ಈ ಕುರಿತು ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಸದ್ಯ ಪೂಜ್ಯರ ಸಲಹೆಯಂತೆ ಸಿಎಂ ಜೊತೆ ಮಾತನಾಡಲು ದಿನಾಂಕ ನಿಗದಿ ಮಾಡಿದ್ದೇವೆ. ಒಂದು ಕಡೆ ರಾಜ್ಯ ಸರ್ಕಾರ ಬಲ್ಡೋಟಾ ಕಂಪನಿ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಜೊತೆಗೆ ಕದ್ದು ಮುಚ್ಚಿ ಭೂಮಿ ಪೂಜೆ ನಡಿದಿದೆ. ಆದ್ರೆ ಈ ಬಗ್ಗೆ ಕೇಂದ್ರದ ಎದುರು ಯಾವುದೇ ಪ್ರಸ್ತಾವನೆ ಸಲ್ಲಿಕೆ ಆಗಿಲ್ಲ ಎಂದಿದ್ದಾರೆ. ಇದು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡು ಸ್ಟೀಲ್ ಪ್ಲ್ಯಾಂಟ್ ವಿಸ್ತರಣೆ ಮಾಡಲಾಗ್ತಿದೆ. ಜನಸಾಮಾನ್ಯರ ವಿರೋಧ ಕಟ್ಟಿಕೊಂಡು ಜನರಿಗೆ ತೊಂದರೆಯಾಗುವಂತಹ ಯೋಜನೆಗಳನ್ನ ತರಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಹೇಳಿದ್ದೀನಿ. ಈ ಹೋರಾಟಕ್ಕೆ ನಮ್ಮ ಪಕ್ಷ, ನಾನು ಎಲ್ಲರೂ ಸ್ವಾಮೀಜಿಗಳ ಜೊತೆ ನಿಲ್ಲುತ್ತೇವೆ ಎಂದಿದ್ದಾರೆ.

ಜನರು, ಸಚಿವರು, ಸಂಸದರು, ಶಾಸಕರು ವಿರೋಧ ಮಾಡ್ತಿದ್ದಾರೆ, ಆದ್ರೆ ಕಂಪನಿ ಮಾತ್ರ ಇದಕ್ಕೆ ಸೊಪ್ಪು ಹಾಕದೆ ಕದ್ದು ಮುಚ್ಚಿ ಭೂಮಿ ಪೂಜೆ ಮಾಡಿದೆ. ಇತ್ತ ಜನಪ್ರತಿನಿಧಿಗಳು ಸಿಎಂನ್ನು ಭೇಟಿ ಮಾಡಲಿದ್ದು, ಬಳಿಕ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂದು ಜಿಲ್ಲೆಯ ಜನರು ಕೂತುಹಲದಿಂದ ಕಾಯುತ್ತಿದ್ದಾರೆ.ಇದನ್ನೂ ಓದಿ: ಬೆಂಗಳೂರು| ನೇಣು ಬಿಗಿದುಕೊಂಡು ನವವಿವಾಹಿತೆ ಆತ್ಮಹತ್ಯೆ

 

Share This Article