ಆಧಾರವಿಲ್ಲದೆ ವಿಪಕ್ಷಗಳು ಆರೋಪ ಮಾಡಬಾರದು – ಟಿಕೆಟ್ ದರ ಏರಿಕೆ ಸಮರ್ಥಿಸಿಕೊಂಡ ಸಿಎಂ

Public TV
2 Min Read

-ರಾಜಕಾರಣಿಗಳು ಊಟಕ್ಕೆ ಸೇರುವುದೂ ತಪ್ಪೇ ಎಂದು ಕಿಡಿ

ಬೆಂಗಳೂರು: ವಿರೋಧ ಪಕ್ಷಗಳದ್ದು ಕೇವಲ ಆರೋಪ ಮಾಡುವುದೇ ಕೆಲಸವಲ್ಲ. ದಾಖಲಾತಿಗಳ ಸಮೇತ ಆರೋಪ ಮಾಡಬೇಕು ಹಾಗೂ ಆರೋಪಗಳನ್ನು ಸಾಬೀತುಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ನಗರದ ಎಂ.ಬಿ.ಎ ಗ್ರೌಂಡ್ (MBA Ground) ಹೆಲಿಪ್ಯಾಡ್ ಆವರಣದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಸರ್ಕಾರದಲ್ಲಿ 60% ಕಮಿಷನ್ ಪಡೆಯಲಾಗುತ್ತಿದೆ ಎಂದು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು. ಕೇಂದ್ರ ಸರ್ಕಾರ ರೈಲ್ವೆ ದರ ಏರಿಕೆ ಮಾಡಿಲ್ಲವೇ? ನೌಕರರ ವೇತನ, ಡೀಸಲ್ ಬೆಲೆ ಏರಿಕೆ, ಬಸ್ಸುಗಳನ್ನು ಕೊಳ್ಳುವುದು ಹಾಗೂ ಹಣದುಬ್ಬರವೂ ಆಗಿದೆ. ವರ್ಷಗಳ ಹಿಂದೆ ಬೆಲೆ ಹೆಚ್ಚಿಸಲಾಗಿದ್ದು, ಸಾರಿಗೆ ನಿಗಮಗಳು ತೊಂದರೆಯಲ್ಲಿವೆ ಎನ್ನುವ ಕಾರಣ ಹಾಗೂ ಬೇಡಿಕೆಯೂ ಇದ್ದುದ್ದರಿಂದ ಬೆಲೆಯೇರಿಸಲಾಗಿದೆ. ಬಿಜೆಪಿ ಹಾಗೂ ಕುಮಾರಸ್ವಾಮಿಯವರ ಕಾಲದಲ್ಲಿಯೂ ಬೆಲೆ ಹೆಚ್ಚಿಸಲಿಲ್ಲವೇ? ಕೇಂದ್ರ ಸರ್ಕಾರ ರೈಲ್ವೆ ದರ ಏರಿಕೆ ಮಾಡಿಲ್ಲವೇ ಎಂದು ಪ್ರಶ್ನಿಸಿದರು.ಇದನ್ನೂ ಓದಿ: ಚಿತ್ರಸಂತೆಗೆ ಚಾಲನೆ – ಮನೆಗೊಂದು ಕಲಾಕೃತಿ ಇರಬೇಕು: ಸಿಎಂ

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಮಾತನಾಡಿದ ಅವರು, ಈ ವಿಷಯಗಳ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ನಾಗೇಂದ್ರ ಅವರ ರಾಜೀನಾಮೆಯಿಂದ ಖಾಲಿಯಾಗಿರುವ ಸಚಿವ ಸ್ಥಾನವನ್ನು ತುಂಬುವ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲಾಗುವುದು ಎಂದರು.

ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ:
ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ನಡೆಸಲು ನಾವು ಸಿದ್ಧವಾಗಿದ್ದೇವೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿಯ ಚುನಾವಣೆ ನಡೆದು ಐದು ವರ್ಷಗಳಾಗಿವೆ. ಈ ವಿಷಯ ನ್ಯಾಯಾಲಯದ ಮುಂದೆ ಹೋಗಿದೆ. ವಿಷಯ ಅಲ್ಲಿಯೇ ಇತ್ಯರ್ಥವಾಗಬೇಕು. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ನಡೆಸಲು ನಾವು ತಯಾರಾಗಿದ್ದೇವೆ ಎಂದರು.

ಒಳಮೀಸಲಾತಿ ನೀಡಲು ನಮ್ಮ ಸರ್ಕಾರ ಬದ್ಧ:
ಒಳಮೀಸಲಾತಿ ನೀಡಬೇಕೆಂದು ಸರ್ವೋಚ್ಚ ನ್ಯಾಯಾಲಯ ಹೇಳಿದ್ದು, ಪ್ರಾಯೋಗಿಕ ಮಾಹಿತಿ ಇಲ್ಲದಿರುವುದರಿಂದ ನಾಗಮೋಹನ್ ದಾಸ್ ಅವರ ನೇತೃತ್ವದ ಸಮಿತಿ ರಚಿಸಲಾಗಿದೆ. ಒಳಮೀಸಲಾತಿ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ರಾಜಕೀಯ ಚರ್ಚೆ ನಡೆದಿಲ್ಲ:
ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ಹಲವು ಸಚಿವರು ಸಭೆ ಸೇರಿದ್ದಾರೆ. ಊಟಕ್ಕೆ ಸೇರುವುದೇ ತಪ್ಪೇ ಎಂದು ಪ್ರಶ್ನಿಸಿದರು. ರಾಜಕಾರಣಿಗಳು ಊಟಕ್ಕೆ ಸೇರಿದರೆ ಬಣ್ಣ ಕಟ್ಟಲಾಗುತ್ತದೆ. ಈಗಾಗಲೇ ಹೇಳಿದಂತೆ ಅಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ದಾವಣಗೆರೆ ವಿಶ್ವ ಕನ್ನಡ ಸಮ್ಮೇಳನ:
ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಬೇಕೆಂದು ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಮಾರ್ಚ್‌ನಲ್ಲಿ ಬಜೆಟ್ ಮಂಡನೆ:
ಈ ಬಾರಿಯ ಬಜೆಟ್‌ನ್ನು ಮಾರ್ಚ್‌ನಲ್ಲಿ ಮಂಡಿಸಿ, ಆಯವ್ಯಯ ಪೂರ್ವಭಾವಿ ಚರ್ಚೆ ಪ್ರಾರಂಭವಾದ ನಂತರ ದಿನಾಂಕವನ್ನು ತಿಳಿಸಲಾಗುವುದು ಎಂದರು.ಇದನ್ನೂ ಓದಿ: ಸಚಿನ್ ಆತ್ಮಹತ್ಯೆ ಕೇಸ್ – ಬೀದರ್‌ನಲ್ಲಿ ಬಹುತೇಕ ತನಿಖೆ ಮುಕ್ತಾಯ, ಕಲಬುರಗಿಗೆ ತೆರಳಿದ ಸಿಐಡಿ ಟೀಂ

Share This Article