ಮೈಸೂರು: ಮೈಸೂರಿಗೆ ನಾಲ್ವಡಿಗಿಂತಲೂ ಸಿದ್ದರಾಮಯ್ಯ ಕೊಡುಗೆ ಜಾಸ್ತಿ ಎಂಬ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಯತೀಂದ್ರ ವಿರುದ್ಧ ವಿಪಕ್ಷಗಳ ನಾಯಕರು ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ಯತೀಂದ್ರ ಮಾತನಾಡುವಾಗ, ಮೈಸೂರು ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರಿಗಿಂತ ಸಿದ್ದರಾಮಯ್ಯ ಕೊಡುಗೆ ಜಾಸ್ತಿ ಇದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವ ಅಡಗೂರು ಹೆಚ್.ವಿಶ್ವನಾಥ್, ಮಾಜಿ ಸಂಸದ ಪ್ರತಾಪ್ ಸಿಂಹ, ಹಾಲಿ ಸಂಸದ ಯದುವೀರ್ ಒಡೆಯರ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಅಸಲಿ ಮುಖ್ಯಮಂತ್ರಿ ನೋಡಲು ಸ್ಕ್ಯಾನ್ ಮಾಡಿ: ನಿಖಿಲ್ ಕುಮಾರಸ್ವಾಮಿ ಸ್ಕ್ಯಾನರ್‌ನಲ್ಲಿರೋ ಫೋಟೊ ಯಾರದ್ದು?
ಆರ್.ಅಶೋಕ್ ಮಾತನಾಡಿ, ತಂದೆ ಮೇಲಿರುವ ದುರಭಿಮಾನದಿಂದ ಹೇಳಿದ್ದಾರೆ. ಕರ್ನಾಟಕಕ್ಕೆ ಒಡೆಯರ್ ಅವರ ಕಾಣಿಕೆ ತುಂಬಾ ಇದೆ. ಕೆಆರ್‌ಎಸ್‌ನಿಂದ ನಾವು ಅನ್ನ ತಿಂದಿದ್ದೇವೆ. ಎಲ್ಲಾ ಸಮುದಾಯಕ್ಕೆ ಸಾಮಾಜಿಕ ನ್ಯಾಯ ತಂದವರು ಒಡೆಯರ್. ಮುಡಾದಲ್ಲಿ 14 ಸೈಟ್ ನನಗೆ ಬೇಕು ಎಂದ ಸಿದ್ದರಾಮಯ್ಯ ಅವರನ್ನು, ಚಿನ್ನ ಅಡವಿಟ್ಟು ಕೆಆರ್‌ಎಸ್ ಕಟ್ಟಿದವರಿಗೆ ಹೋಲಿಕೆ ಮಾಡೋದು ಹಾಸ್ಯಾಸ್ಪದ. ಗಾಂಧೀಜಿ ಅವರಿಗೆ ಹೋಲಿಕೆ ಮಾಡ್ಲಿಲ್ವಲ್ಲ ಪುಣ್ಯ. ಇದು ರಾಜಮನೆತನಕ್ಕೆ, ಮೈಸೂರಿನ ಜನಕ್ಕೆ ಮಾಡಿದ ಅವಮಾನ. ಕೂಡಲೇ ಯತೀಂದ್ರ ಸಿದ್ದರಾಮಯ್ಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಯದುವೀರ್ ಒಡೆಯರ್ ಪ್ರತಿಕ್ರಿಯಿಸಿ, ಯಾರು ಯಾರಿಗೂ ಹೋಲಿಕೆ ಮಾಡಿ ಮಾತನಾಡುವುದು ಸರಿಯಲ್ಲ. ನಾನು ಅವರಿಗಿಂತ ಜಾಸ್ತಿ ಇವರಿಗಿಂತ ಕಡಿಮೆ ಎಂದುಕೊಳ್ಳಬಾರದು. ಮಹಾರಾಜರು ಅವರ ಕೆಲಸ ಅವರು ಮಾಡಿದ್ದಾರೆ. ಇವರು ಏನು ಕೆಲಸ ಮಾಡಿದ್ದಾರೆ ಎಂಬುದನ್ನು ಹೇಳಬೇಕು. ಮಹಾರಾಜರು ಮಾಡಿದ ಕೆಲಸ ಜನರ ಮುಂದೆ ಇದೆ. ನಾನು ಅದೇ ವಂಶಸ್ಥನಾಗಿ ಈ ಬಗ್ಗೆ ಮಾತನಾಡಿದರೆ ಸರಿ ಅನ್ನಿಸುವುದಿಲ್ಲ. ಜನರಿಗೆ ಗೊತ್ತಿದೆ ಮಹಾರಾಜರು ಏನು ಮಾಡಿದ್ದಾರೆ ಎಂಬುದು. ವಿಷಯಗಳನ್ನ ಡೈವರ್ಟ್ ಮಾಡಲು ಯಾವ ಯಾವುದೋ ವಿಚಾರವನ್ನ ಹೇಳುವುದು ಸರಿಯಲ್ಲ. ಮೈಸೂರು ವಿಮಾನ ನಿಲ್ದಾಣಕ್ಕೆ ಕಳೆದ 15 ವರ್ಷಗಳಿಂದ ಏನು ಕೊಟ್ಟಿದ್ದೀರಾ? ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಮೊದಲು ಜನರ ಸಮಸ್ಯೆ ಪರಿಹರಿಸಿ. ಟ್ಯಾಕ್ಸ್ ಹೆಸರಿನಲ್ಲಿ ಬಡ ವ್ಯಾಪರಸ್ಥರಿಗೆ ಹಿಂಸೆ ಕೊಡಲಾಗುತ್ತಿದೆ. ಮೊದಲು ಇದನ್ನು ನಿಲ್ಲಿಸಿ. ನೀವು ನೀವೇ ಹೋಲಿಕೆ ಮಾಡಿಕೊಳ್ಳುವುದು ಬೇಡ ಎಂದು ಯತೀಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 2011ರಿಂದಲೂ ಚುನಾವಣೆಯಲ್ಲಿ ಅಕ್ರಮ ನಡೆಯುತ್ತಲೇ ಇದೆ: ರಾಮಲಿಂಗಾ ರೆಡ್ಡಿ
ಮಾಜಿ ಸಚಿವ ಅಡಗೂರು ಹೆಚ್.ವಿಶ್ವನಾಥ್ ಮಾತನಾಡಿ, ಇದು ದುರಹಂಕಾರದ ಪರಮಾವಧಿ. ಸಿದ್ದರಾಮಯ್ಯ ಯಾವಾಗಲೂ ನಾನೇ ನಾನೇ ಅಂತಾರೆ. ದೇವರಾಜ ಅರಸುಗಿಂತಾ ನಾನೇ ಒಳ್ಳೆ ಆಡಳಿತ ಕೊಟ್ಟಿದ್ದು ಅಂತಾರೆ. ನಾನೇ ನಾನೇ ಎನ್ನುವ ಅಹಂ, ದುರಹಂಕಾರ ಸಿದ್ದರಾಮಯ್ಯ ಕುಟುಂಬದಲ್ಲಿ ವಂಶವಾಹಿ ರೀತಿ ಹರಿದು ಕೊಂಡು ಬಂದಿದೆ. ಸಿದ್ದರಾಮಯ್ಯ ಹಾಗೂ ಅವರ ಮಗ ಮನುಷ್ಯ ದ್ವೇಷಿಗಳು ಥರ ಮಾತಾಡುತ್ತಿದ್ದಾರೆ. ಸಿದ್ದರಾಮಯ್ಯರ ಮಗ ಈ ದೌಲತ್‌ಗಿರಿ ಮೊದಲು ಬಿಡಲಿ. ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಹೋಲಿಕೆ ಮಾಡುವ ಯಾವ ರಾಜಕಾರಣಿ ಈ ದೇಶದಲ್ಲೇ ಇಲ್ಲ ಎಂದು ಕಿಡಿಕಾರಿದ್ದಾರೆ.
ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿ, ಯತೀಂದ್ರ ಅವರೇ ನಿಮ್ಮಪ್ಪನ ಕೊಡುಗೆ ಏನೂ ಹೇಳಿ? ಕೆಆರ್ ಆಸ್ಪತ್ರೆಗೆ ಸುಣ್ಣ ಹೊಡೆಸಲು ನಿಮ್ಮಪ್ಪನ ಕೈಯಲ್ಲಿ ಆಗಿಲ್ಲ. ಮೈಸೂರಿಗೆ ನಿಮ್ಮಪ್ಪನ ಕೊಡುಗೆ ಏನೂ ಹೇಳಿ? ನಿಮ್ಮ ಅಮ್ಮ-ಅಪ್ಪ ಸೇರಿ ಮುಡಾದಲ್ಲಿ ಸೈಟ್ ಹೊಡೆದರು, ಅದೇನಾ ನಿಮ್ಮ ಅಪ್ಪನಾ ಕೊಡುಗೆ ಯತೀಂದ್ರ ಎಂದು ಟಾಂಗ್ ಕೊಟ್ಟಿದ್ದಾರೆ.