ಬೆಂಗಳೂರು: ನಮ್ಮ ಸರ್ಕಾರ ಇದ್ದಿದ್ರೆ ಪಾಕಿಸ್ತಾನ (Pakistan) ಪರ ಘೋಷಣೆ ಕೂಗಿದವರನ್ನ ಅಲ್ಲಿಯೇ ಗುಂಡಿಟ್ಟು ಸಾಯಿಸುತ್ತಿತ್ತು ಎಂದು ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದಲ್ಲಿ ಎಮರ್ಜೆನ್ಸಿ ತಂದಿದ್ದಾರೆ. ವಿಪಕ್ಷಗಳು ದೇಶದ್ರೋಗಿಗಳ ಬಂಧನ ಮಾಡಿ ಅಂತ ಧರಣಿ ಮಾಡುತ್ತಿವೆ. ಆದರೆ ಸರ್ಕಾರ ಇದುವರೆಗೂ ಯಾರನ್ನ ಬಂಧನ ಮಾಡಿಲ್ಲ. ನಾವು ಸದನದಲ್ಲಿ ಧರಣಿ ಮಾಡಿದರೂ ಸೆನ್ಸಾರ್ ಹಾಕಿದ್ರು ಎಂದು ವಾಗ್ದಾಳಿ ನಡೆಸಿದರು.
ನಮ್ಮ ಹೋರಾಟ ದೇಶದ ಬದುಕಿಗಾಗಿ. ಪಾಕ್ ಭಯೋತ್ಪಾದಕರ ಗುಂಡಿಗೆ ನಮ್ಮ ಸೈನಿಕರು ಬಲಿಯಾಗ್ತಿದ್ದಾರೆ. ನಮ್ಮ ಸರ್ಕಾರ ಇದ್ದಿದ್ರೆ ಪಾಕ್ ಪರ ಘೋಷಣೆ ಕೂಗಿದವರನ್ನ ಅಲ್ಲೇ ಗುಂಡಿಟ್ಟು ಸಾಯಿಸ್ತಿತ್ತು. ಇವರು ಬಂಧನ ಕೂಡಾ ಮಾಡದೇ ರಕ್ಷಣೆ ಮಾಡ್ತಿದ್ದಾರೆ ಎಂದು ಅಶೋಕ್ (R Ashok) ಗರಂ ಆದರು.
ನಮ್ಮ ದೇಶದ ಯೋಧರು ಪಾಕಿಸ್ತಾನದ ಭಯೋತ್ಪಾದಕರ ಗುಂಡಿಗೆ ಎದೆಯೊಡ್ಡಿ ನಿಂತಿದ್ರೆ, ಇಲ್ಲಿ ವಿಧಾನಸೌಧದೊಳಗೆ ಪಾಕಿಸ್ತಾನಕ್ಕೆ ಜೈಕಾರ ಹಾಕುವವರ ಪರ ಕಾಂಗ್ರೆಸ್ ನಿಲ್ಲುತ್ತೆ. ನಮ್ಮ ಸರ್ಕಾರ ಇದಿದ್ರೇ ದೇಶ ದ್ರೋಹಿಗಳನ್ನ ಗುಂಡಿಕ್ಕಿ ಕೊಲ್ಲುತಿತ್ತು ಎಂದರು. ಇದನ್ನೂ ಓದಿ: ವಿಧಾನಸಭೆಯಲ್ಲಿ ಮತ್ತೆ ‘ಪಾಕಿಸ್ತಾನ್ ಜಿಂದಾಬಾದ್’ ಗದ್ದಲ; ದೋಸ್ತಿಗಳಿಂದ ಸಭಾತ್ಯಾಗ
ಕಾಂಗ್ರೆಸ್‍ನವರು ಈ ಕೇಸ್ ಮುಚ್ಚಿ ಹಾಕುವ ಕ್ಯಾಸೆಟ್ ರೆಡಿ ಮಾಡ್ತಿದ್ದಾರೆ. ಪ್ರಿಯಾಂಕಾ ಖರ್ಗೆ ಈಗಾಗಲೇ ಹೇಳಿದ್ದಾರೆ. ದೇಶದ್ರೋಹಿಗಳನ್ನ ಸೇಫ್ ಮಾಡೋ ಕೆಲಸ ಮಾಡುತ್ತಿದ್ದಾರೆ. ನೋಡ್ತಿರಿ ಎಫ್ ಎಸ್ ಎಲ್ ವರದಿ ಹೇಗೆ ಬರುತ್ತೆ ಅಂತಾ. ಎಫ್‍ಎಸ್‍ಎಲ್ ಮೂಲಕ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ಮಾಡ್ತಿದ್ದಾರೆ. ನಾಸೀರ್ ಹುಸೇನ್ ರನ್ನ ಬಂಧಿಸಿ ವಿಚಾರಣೆ ಮಾಡಬೇಕಿತ್ತು. ಅಂದು ಪ್ರತಾಪ್ ಸಿಂಹರನ್ನ ಕಟಕಟೆಯಲ್ಲಿ ನಿಲ್ಸಿದ್ರು, ಅವರೇನೂ ಇವರ ಹಾಗೆ ದೇಶದ್ರೋಹದ ಕೆಲಸ ಮಾಡಿರಲಿಲ್ಲ ಎಂದು ಸಿಡಿಮಿಡಿಗೊಂಡರು.