ಸಿದ್ದರಾಮಯ್ಯ ರಾಜೀನಾಮೆ ಕೇಳೋ ವಿಪಕ್ಷಗಳಿಗೆ ನೈತಿಕತೆ ಇಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

Public TV
2 Min Read

ಬೆಂಗಳೂರು: ಸಿದ್ದರಾಮಯ್ಯ ರಾಜೀನಾಮೆ ಕೇಳೋ ವಿಪಕ್ಷಗಳ ನಾಯಕರಿಗೆ ನೈತಿಕತೆ ಇದೆಯಾ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹೈಕೋರ್ಟ್‌ನಿಂದ ಸಿಎಂ ವಿರುದ್ಧ ತೀರ್ಪು ಬಂದ ಹಿನ್ನೆಲೆಯಲ್ಲಿ ಸಿಎಂ ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಇದು ರಾಜಕೀಯ ಪಿತೂರಿ. ಹೈಕೋರ್ಟ್‌ನಿಂದ ತೀರ್ಪು ಬಂದಿದೆ. ನಮಗೆ ಮುಂದೆ ಅನೇಕ ಆಯ್ಕೆಗಳು ಇವೆ. ನಾವು ಕಾನೂನು ಹೋರಾಟ ಮಾಡುತ್ತೇವೆ. ನಾವೆಲ್ಲ ಸಿಎಂ ಜೊತೆ ಇದ್ದೇವೆ ಎಂದು ತಿಳಿಸಿದರು.

ಸಿಎಂ ರಾಜೀನಾಮೆಗೆ ವಿಪಕ್ಷಗಳ ಒತ್ತಡ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿಪಕ್ಷಗಳಿಗೆ ಹೇಳಿ ಸಮ್ಮಿಶ್ರ ಸರ್ಕಾರದಲ್ಲಿ ಎಷ್ಟು ಜನರ ಮೇಲೆ ಕೇಸ್ ಇದೆ. ಎಫ್‌ಐಆರ್ ದಾಖಲು ಆಗಿದೆ. ಎಷ್ಟು ಜನ ಬೇಲ್ ಮೇಲೆ ಇದ್ದಾರೆ. ಮೊದಲು ಅವರ ಬಳಿ ರಾಜೀನಾಮೆ ಪಡೆಯಲಿ. ಆಮೇಲೆ ಸಿಎಂ ಅವರ ರಾಜೀನಾಮೆ ಕೇಳಲಿ ಎಂದು ಆಕ್ರೋಶ ಹೊರ ಹಾಕಿದರು.

ರಾಹುಲ್ ಗಾಂಧಿ, ಡಿಕೆ ಶಿವಕುಮಾರ್ ಕೂಡಾ ಬೇಲ್ ಮೇಲೆ ಇದ್ದಾರೆ ಅನ್ನೋ ಪ್ರಶ್ನೆ ಅಲ್ಲ. ಬಿಜೆಪಿಯೇತರ ಸರ್ಕಾರ ಅಸ್ಥಿರ ಮಾಡಲು ಇಂತಹ ಅಸ್ತ್ರಗಳನ್ನ ಅವರು ಬಿಡುತ್ತಿದ್ದಾರೆ. ದೇಶದ ದುರಂತ ಅಂದರೆ ಪ್ರಜಾಪ್ರಭುತ್ವದ ಅಸ್ತಿತ್ವ ಅಲುಗಾಡುತ್ತಿದೆ. ಚುನಾಯಿತ ಪ್ರತಿನಿಧಿಗಳನ್ನ ಈ ರೀತಿ ಸೇಡಿನ ರಾಜಕೀಯ ಮಾಡಿ ಸರ್ಕಾರವನ್ನ ಅಸ್ಥಿರ ಮಾಡೋ ಪ್ರಯತ್ನ ಆಗುತ್ತಿದೆ. ಕರ್ನಾಟಕದ ಜನ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿದ್ದಾರೆ. ಇದು ಬಿಜೆಪಿ-ಜೆಡಿಎಸ್ ಅವರಿಗೆ ಸಹಿಸಲು ಆಗುತ್ತಿಲ್ಲ. ಅದಕ್ಕಾಗಿ ಇಂತಹ ನಾಟಕವನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರಿದರು.

ಸಿಎಂ ರಾಜೀನಾಮೆ ಕೇಳುವವರಿಗೆ ಮೊದಲು ವಿಪಕ್ಷದವರಿಗೆ ನೈತಿಕತೆ ಇದೆಯಾ ಕೇಳಿ. ಅವರಿಗೆ ನೈತಿಕತೆ ಇದೆಯಾ ಅವರನ್ನ ಅವರು ಮೊದಲು ಪ್ರಶ್ನೆ ಮಾಡಿಕೊಳ್ಳಲಿ. ವಿಪಕ್ಷದ ಎಷ್ಟು ಜನರ ಮೇಲೆ ಕೇಸ್ ಇಲ್ಲ. ಇದು ದ್ವೇಷದ ರಾಜಕೀಯ ಇದನ್ನ ನಾವು ರಾಜಕೀಯವಾಗಿಯೇ ಎದುರಿಸುತ್ತೇವೆ. ಹೈಕೋರ್ಟ್‌ನಲ್ಲಿ ಹಿನ್ನಡೆ ಆಗಿರಬಹುದು. ವಿಭಾಗೀಯ ಪೀಠ ಇದೆ. ಸುಪ್ರೀಂ ಕೋರ್ಟ್ ಇದೆ. ಕಾನೂನು ಹೋರಾಟ ಮಾಡುತ್ತೇವೆ. ನಾವೆಲ್ಲ ಸಿಎಂ ಜೊತೆ ಇದ್ದೇವೆ. ನೀವು ಹೆದರಬೇಡಿ. ನಿಮ್ಮ ನಾಯಕತ್ವ ರಾಜ್ಯ ಒಪ್ಪಿದೆ. ಮಂತ್ರಿ ಮಂಡಲ ಒಪ್ಪಿದೆ. ನಾವೆಲ್ಲರೂ ಸಿಎಂ ಜೊತೆ ಗಟ್ಟಿಯಾಗಿ ಇದ್ದೇವೆ ಎಂದು ಹೇಳಿದರು.

Share This Article