ಐಪಿಎಲ್‌ ಸಮಾರೋಪ ಸಮಾರಂಭದಲ್ಲಿ ʻಆಪರೇಷನ್ ಸಿಂಧೂರʼ ವಿಜಯೋತ್ಸವ – ಯೋಧರಿಗೆ ಗೀತನಮನ!

Public TV
2 Min Read

– ಮೈನವಿರೇಳಿಸಿದ ದೇಶಭಕ್ತಿ ಗೀತಗಾಯನ, ರೋಮಾಂಚಕ ಏರ್‌ಶೋ

ಮುಂಬೈ: 18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಯಶಸ್ವಿಯಾಗಿ ನೆರವೇರಿದೆ. ಇಂದು ಪಂಜಾಬ್‌ ಕಿಂಗ್ಸ್‌ ಮತ್ತು ಆರ್‌ಸಿಬಿ ನಡುವಿನ ಫೈನಲ್‌ ಪಂದ್ಯ ಮುಕ್ತಾಯದೊಂದಿಗೆ ಈ ಆವೃತ್ತಿಗೆ ತೆರೆ ಬೀಳಲಿದೆ. ಇಂದು ಫೈನಲ್‌ ಪಂದ್ಯಕ್ಕೂ ಮುನ್ನ ನಡೆಯುತ್ತಿರುವ ಸಮಾರೋಪ ಸಮಾರಂಭದಲ್ಲಿ ʻಆಪರೇಷನ್‌ ಸಿಂಧೂರʼ ವಿಜಯೋತ್ಸವ ಆಚರಿಸಲಾಯಿತು.

ಇಂದಿನ ಫೈನಲ್‌ ಪಂದ್ಯವನ್ನು ಭಾರತೀಯ ಸೇನೆಗೆ ಅರ್ಪಿಸಲು ಬಿಸಿಸಿಐ ನಿರ್ಧಾರ ಕೈಗೊಂಡಿತ್ತು. ಅದಕ್ಕಾಗಿ ಪಂದ್ಯ ಆರಂಭಕ್ಕೂ ಮುನ್ನ ಮೂರು ಸೇನೆಗಳಿಗೆ ಗೌರವ ಸಲ್ಲಿಸಲಾಯಿತು. ದೇಶಭಕ್ತಿ ನೃತ್ಯಗಳು, ಶಂಕರ್‌ ಮಹಾದೇವನ್‌, ಶ್ರೇಯಾ ಘೋಷಾಲ್ ತಂಡದಿಂದ ದೇಶಭಕ್ತಿ ಗೀತೆಗಳ ನಮನ ಸಲ್ಲಿಸಲಾಯಿತು. ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ – ಐಪಿಎಲ್ ಫೈನಲ್‌ನಲ್ಲಿ ಆಡಲಿದ್ದಾರೆ ಫಿಲ್ ಸಾಲ್ಟ್

45 ನಿಮಿಷಗಳ ಈ ಸಮಾರಂಭದಲ್ಲಿ ಖ್ಯಾತ ಹಿನ್ನೆಲೆ ಗಾಯಕರ ದೇಶಭಕ್ತಿ ಗೀತೆಗಳು ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳ ಮೈ ನವಿರೇಳುವಂತೆ ಮಾಡಿದವು. ಜೈ ಹೋ, ವಂದೇ ಮಾತರಂ, ಹೇ ವತನ್‌ ಮೇರೆವತನ್‌ ಮೊದಲಾದ ಗೀತೆಗಳಿಗೆ ಅಭಿಮಾನಿಗಳು ತಲೆದೂಗಿದರು. ಅಲ್ಲದೇ ರಾಷ್ಟ್ರಧ್ವಜ ಹಾರಿಸುತ್ತಾ.. ಎದ್ದು ನಿಂತು ಗೌರವ ಸಲ್ಲಿಸಿದರು. ಇದೇ ವೇಳೆ ವಾಯುಪಡೆಯಿಂದ ಏರ್‌ ಶೋ ಕೂಡ ನಡೆಯಿತು. ದೇಶದ ಅತಿದೊಡ್ಡ ಕ್ರೀಡಾಂಗಣದ ಮೇಲೆ ವಾಯುಪಡೆಯ ವಿಮಾನಗಳ ಸಾಹಸ ದೃಶ್ಯಗಳು ಅಭಿಮಾನಿಗಳನ್ನು ರೋಮಾಂಚನಗೊಳಿಸಿತು. ಇದನ್ನೂ ಓದಿ: ಗೆದ್ದು ಬಾ ಆರ್‌ಸಿಬಿ – ಶುಭ ಹಾರೈಸಿದ ಸಿಎಂ ಸಿದ್ದರಾಮಯ್ಯ

ಸೇನೆಗೆ ಸಮರ್ಪಿಸಲು ಕಾರಣವೂ ಇದೆ.
ಕಳೆದ ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನ ಹತ್ಯೆಗೈಯಲಾಗಿತ್ತು. ಇದಕ್ಕೆ ʻಆಪರೇಷನ್‌ ಸಿಂಧೂರʼ ಕಾರ್ಯಾಚರಣೆ ಮೂಲಕ ಭಾರತ (India) ಪ್ರತೀಕಾರ ತೀರಿಸಿಕೊಂಡಿತ್ತು. ಅಲ್ಲದೇ ಪಾಕಿಸ್ತಾನದ ದಾಳಿಗಳನ್ನ ವಿಫಲಗೊಳಿಸಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರತೀಕಾರ ಸಮರ ಜೋರಾಗುತ್ತಿದ್ದಂತೆ ಐಪಿಎಲ್‌ ಪಂದ್ಯಗಳನ್ನು ಒಂದು ವಾರಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಭಾರತ ಮತ್ತು ಪಾಕ್ ‌ನಡುವೆ ಕದನ ವಿರಾಮ ಘೋಷಣೆಯಾಗುತ್ತಿದ್ದಂತೆ ಮೇ 17ರಿಂದ ಟೂರ್ನಿ ಪುನರಾರಂಭಗೊಳಿಸಲಾಯಿತು. ಹೀಗಾಗಿ ಭಾರತೀಯ ಸೇನೆಯ ಈ ಶೌರ್ಯ, ಸಾಹಸಕ್ಕೆ ಗೌರವ ಸಲ್ಲಿಸುವ ಸಲುವಾಗಿ ಐಪಿಎಲ್‌ ಸಮಾರೋಪ ಸಮಾರಂಭದಲ್ಲಿ ʻಆಪರೇಷನ್‌ ಸಿಂಧೂರʼ ವಿಜಯೋತ್ಸವ ಆಚರಿಸಲು ಬಿಸಿಸಿಐ ನಿರ್ಧರಿಸಿತು.

ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಮೂರು ಸೇನಾಪಡೆಗಳ ಮುಖ್ಯಸ್ಥರಾದ ಭಾರತೀಯ ಸೇನಾ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ, ನೇವಿ ಮುಖ್ಯಸ್ಥ ಅಡ್ಮಿರಲ್‌ ದಿನೇಶ್‌ ಕೆ ತ್ರಿಪಾಠಿ, ಏರ್‌ಚೀಫ್‌ ಮಾರ್ಷಲ್‌ ಅಮರ್‌ ಪ್ರೀತ್‌ ಸಿಂಗ್‌ ಅವರನ್ನ ವೇದಿಕೆಗೆ‌ ಸೇನಾ ಗೌರವದೊಂದಿಗೆ ಆಹ್ವಾನಿಸಲಾಯಿತು. ಬಳಿಕ ಸೇನೆಗೆ ಗೌರವಾರ್ಥವಾಗಿ ಮಿಲಿಟರಿ ಬ್ಯಾಂಡ್‌ ಪ್ರದರ್ಶನ ನಡೆಯಿತು. ಇದನ್ನೂ ಓದಿ: IPL 2025 Final – ಪಂದ್ಯಕ್ಕೂ ಮುನ್ನವೇ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಬ್ಲಾಸ್ಟ್

Share This Article