ಹಳೆ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ – ಹಲವು ಪ್ರಭಾವಿಗಳು ಬಿಜೆಪಿ ಸೇರ್ಪಡೆ

Public TV
3 Min Read

ಬೆಂಗಳೂರು: ಮೈಸೂರು ಕರ್ನಾಟಕ ಭಾಗದಲ್ಲಿ ಬಿಜೆಪಿಯ (BJP) ಆಪರೇಷನ್ ಕಮಲ ಕಾರ್ಯಾಚರಣೆಗೆ ಮತ್ತಷ್ಟು ಬಲ ಬಂದಿದೆ. ಆಪರೇಷನ್ ಕಮಲದ ಭಾಗವಾಗಿ ಸೋಮವಾರ ಹಾಸನ, ಮೈಸೂರು ಹಾಗೂ ರಾಮನಗರ ಭಾಗದ ಹಲವರು ಬಿಜೆಪಿ ಸೇರಿದ್ದಾರೆ.

ಬೆಂಗಳೂರಿನ (Bengaluru) ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel), ಸಚಿವ ಗೋಪಾಲಯ್ಯ ಸಮ್ಮುಖದಲ್ಲಿ ಹಲವರು ಸೋಮವಾರ ಪಕ್ಷ ಸೇರ್ಪಡೆಯಾಗಿದ್ದಾರೆ.

ಕಾಂಗ್ರೆಸ್ ಯುವ ಮುಖಂಡ ಕವೀಶ್‌ಗೌಡ ವಾಸು, ಜೆಡಿಎಸ್ ತಾಲೂಕು ಘಟಕದ ಮಾಜಿ ಅಧ್ಯಕ್ಷ ಸೋಮಶೇಖರ್, ಕಾಂಗ್ರೆಸ್ ಮಾಜಿ ಪದಾಧಿಕಾರಿ ವೆಂಕಟೇಶ್, ರೈತ ಸಂಘಟನೆ ಜಿಲ್ಲಾ ಅಧ್ಯಕ್ಷ ದಿವಾಕರ್ ಗೌಡ, ಕಾಂಗ್ರೆಸ್ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿವಿ ರಾಜಪ್ಪ, ಜೆಡಿಎಸ್ ಪರಾಜಿತ ಅಭ್ಯರ್ಥಿ ಗಿರೀಶ್ ನಾಶಿ, ಪುಣ್ಯ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕಿ ಡಾ.ಪುಣ್ಯವತಿ ನಾಗರಾಜ್ ಅವರು ಬಿಜೆಪಿ ಸೇರಿದರು. ಬಿಜೆಪಿ ಸೇರ್ಪಡೆಗೊಂಡವರಿಗೆ ಪಕ್ಷದ ಬಾವುಟ ನೀಡಿ, ಶಾಲು ಹೊದಿಸಿ ಬರಮಾಡಿಕೊಳ್ಳಲಾಯಿತು.

ಕಾಂಗ್ರೆಸ್‌ನ ಮಾಜಿ ಶಾಸಕ ವಾಸು ಅವರ ಪುತ್ರ ಕವೀಶ್ ಗೌಡ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇವರು ಚಾಮುಂಡೇಶ್ವರಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ ಎನ್ನಲಾಗಿದೆ. ಹುಣಸೂರು ಕ್ಷೇತ್ರದ ಪರಾಜಿತ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಸಕಲೇಶಪುರದ ನಿವೃತ್ತ ಎಂಜಿನಿಯರ್ ವೆಂಕಟೇಶ್, ಅರಕಲಗೂಡು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ದಿವಾಕರ್ ಗೌಡ, ಹಾಸನದ ಕಾಂಗ್ರೆಸ್ ಮುಖಂಡ ಸಿವಿ ರಾಜಪ್ಪ, ಮಹಾಲಕ್ಷ್ಮಿ ಲೇಔಟ್‌ನ ಜೆಡಿಎಸ್ ಮುಖಂಡ ಗಿರೀಶ್ ನಾಶಿ ಹಾಗೂ ರಾಮನಗರದ ಡಾ. ಪುಣ್ಯವತಿ ನಾಗರಾಜ್ ಬಿಜೆಪಿ ಸೇರ್ಪಡೆಯಾದ ಪ್ರಮುಖರು. ಗಿರೀಶ್ ನಾಶಿಯವರು ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪರಾಜಿತ ಅಭ್ಯರ್ಥಿಯಾಗಿದ್ದರು.

ಬಿಜೆಪಿ ಸೇರಿದ ಬಳಿಕ ಮಾತಾಡಿದ ಕವೀಶ್ ಗೌಡ ವಾಸು, ನಾನು ಮೈಸೂರಿನ ಮಾಜಿ ಶಾಸಕ ವಾಸು ಅವರ ಪುತ್ರ. ವಿದ್ಯಾವಿಕಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟೀ ಸದಸ್ಯ. ನನ್ನ ತಂದೆಯವರ ಕ್ಷೇತ್ರದಲ್ಲಿ ರಾಜಕೀಯ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೆ. ವಾಸು ಅವರು ಕಳೆದ 35 ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದಾರೆ. ಕಳೆದ ಸಲ ನಮ್ಮ ತಂದೆ ಸೋತಿದ್ದರು. ನಾನು ಬಿಜೆಪಿ, ತಂದೆ ಕಾಂಗ್ರೆಸ್ ಹೇಗೆ ಎನ್ನುವ ಪ್ರಶ್ನೆ ಸಹಜವಾಗಿ ಏಳುತ್ತದೆ. ಆದರೆ ನಾನು ಸೈದ್ಧಾಂತಿಕವಾಗಿ ಬಿಜೆಪಿ ಮೆಚ್ಚಿ, ಮೋದಿಯವರ ಕೆಲಸಗಳನ್ನು ಒಪ್ಪಿ ಬಿಜೆಪಿ ಸೇರಿದ್ದೇನೆ. ಪಕ್ಷವು ನನಗೆ ಏನೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಪಕ್ಷದ ಚಟುವಟಿಕೆಗಳಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಭಾಗವಹಿಸುತ್ತೇನೆ ಎಂದರು. ಇದನ್ನೂ ಓದಿ: ಬಿಜೆಪಿಗೆ ಸಿದ್ದರಾಮಯ್ಯ, ಖರ್ಗೆ, ಡಿಕೆಶಿ ಮಕ್ಕಳು ಬರ್ತಾರೆ: ಕಟೀಲ್

ಬಳಿಕ ಮಾತಾಡಿದ ಸಚಿವ ಗೋಪಾಲಯ್ಯ, ಮೈಸೂರು, ಹಾಸನ, ಬೆಂಗಳೂರಿನ ಅನೇಕರು ಬಿಜೆಪಿ ಸೇರಿದ್ದಾರೆ. ಬಿಜೆಪಿ ಸೇರಿದ ಎಲ್ಲರಿಗೂ ಇಲ್ಲಿ ಉತ್ತಮ ಭವಿಷ್ಯ ಇದೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದೆ. ನಾನು ಸ್ವಇಚ್ಛೆಯಿಂದ ಬಿಜೆಪಿಗೆ ಬಂದೆ. ಪಕ್ಷ ನಮಗೆ ಎಲ್ಲಾ ಸ್ಥಾನಮಾನ ಕೊಟ್ಟಿದೆ. 2013 ರಲ್ಲಿ ಬಿಜೆಪಿ ಇಬ್ಭಾಗ ಆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಇಲ್ಲದಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿರಲಿಲ್ಲ. ನಾವೆಲ್ಲಾ ಬಿಜೆಪಿಯಲ್ಲಿ ಒಂದಾಗಿದ್ದೇವೆ, 150+ ಸ್ಥಾನ ಗೆಲ್ಲುತ್ತೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನ ನಮ್ಮ ಪಕ್ಷ ಸೇರುತ್ತಾರೆ ಎಂದು ಗೋಪಾಲಯ್ಯ ತಿಳಿಸಿದರು.

ನಂತರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತಾಡಿ, ಇದೀಗ ಹಳೆ ಮೈಸೂರು (Old Mysuru) ಭಾಗದ ಇತರ ಪಕ್ಷಗಳ ಹತ್ತಾರು ಪ್ರಮುಖರು ಬಿಜೆಪಿ ಸೇರಿದ್ದಾರೆ. ಪರಿವಾರ ವಾದ, ಕುಟುಂಬ ವಾದದಿಂದ ರಾಷ್ಟ್ರೀಯ ವಾದಕ್ಕೆ ಬಂದ ನಿಮಗೆಲ್ಲರಿಗೂ ಸ್ವಾಗತ. ದೇಶವನ್ನು ಸರ್ವತೋಮುಖ ಅಭಿವೃದ್ಧಿಯತ್ತ ಮುನ್ನಡೆಸುವ ನರೇಂದ್ರ ಮೋದಿಯವರ ಚಿಂತನೆಗೆ ಅನುಗುಣವಾಗಿ ಕ್ಷೇತ್ರ, ಮತಗಟ್ಟೆಗಳಲ್ಲಿ ನೀವು ಕೆಲಸ ಮಾಡುತ್ತೀರೆಂದು ಆಶಿಸುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯದ ಅಬಕಾರಿ ಸಚಿವ ಕೆ ಗೋಪಾಲಯ್ಯ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಎಸ್‌ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮೈಸೂರು ಜಿಲ್ಲೆ ಅಧ್ಯಕ್ಷ ಶ್ರೀವತ್ಸ, ಹಾಸನ ಜಿಲ್ಲೆ ಅಧ್ಯಕ್ಷ ಹೆಚ್‌ಕೆ ಸುರೇಶ್, ಮೈಸೂರು ಮಹಾಪೌರ ಶಿವಕುಮಾರ್, ಮಾಜಿ ಶಾಸಕ ಹೆಚ್ ವಿಶ್ವನಾಥ್ ಅವರು ಭಾಗವಹಿಸಿದ್ದರು. ಇದನ್ನೂ ಓದಿ: ಟಿಕೆಟ್ ಕೊಡಲು ‘ತ್ರೀ’ ಸೂತ್ರಕ್ಕೆ ಬಿಜೆಪಿ ಮೊರೆ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *