ಆಪರೇಷನ್ ಕಮಲಕ್ಕೆ ಒಳಗಾದ ‘ಕೈ’ ಶಾಸಕರು ಮರಳಿ ಗೂಡಿಗೆ! – ಶಾಸಕರ ಸ್ಪಷ್ಟನೆ ಇಲ್ಲಿದೆ

Public TV
2 Min Read

ಬೆಂಗಳೂರು: ಸಂಕ್ರಾಂತಿಯ ಹಬ್ಬದ ವೇಳೆ ದೋಸ್ತಿ ಸರ್ಕಾರಕ್ಕೆ `ಕೈ’ ಕೊಟ್ಟು ಬಿಜೆಪಿ ಸೇರಲಿದ್ದಾರೆ ಎಂದು ಬಿಂಬಿತವಾಗಿದ್ದ ಕಾಂಗ್ರೆಸ್ ಶಾಸಕರು ಸದ್ಯ ಉಲ್ಟಾ ಹೊಡೆದಿದ್ದು, ತಾವು ಪಕ್ಷ ನಿಷ್ಠೆ ಹೊಂದಿರುವವರು. ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರುವುದಿಲ್ಲ ಎಂದು ಹೇಳಿದ್ದಾರೆ.

ಪ್ರಮುಖವಾಗಿ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಪ್ರತಿಕ್ರಿಯೆ ನೀಡಿ, ಮನೆಯಲ್ಲಿ ಅಪ್ಪ ಮಕ್ಕಳು ಸಿಟ್ಟಾಗುವುದು ಸಹಜ. ಹಾಗೆಂದ ಮಾತ್ರಕ್ಕೆ ಮನೆ ಬಿಟ್ಟು ಹೋಗಲು ಸಾಧ್ಯವೇ? ಮನೆಯಲ್ಲಿ ಅಪ್ಪ ಮಕ್ಕಳು ಜಗಳವಾಡುತ್ತಾರೆ. ಮನೆಯಲ್ಲಿ ಏನು ಆಗಬೇಕು ಎನ್ನುವುದನ್ನು ಕೇಳುವುದು ನಮ್ಮ ಹಕ್ಕು. ಅದನ್ನು ನಾವು ಕೇಳುತ್ತೇವೆ ಎಂದರು. ಇದನ್ನು ಓದಿ: ಎಲ್ಲರೂ ಅಲ್ಲಲ್ಲಿ ಇದ್ವಿ ಅಷ್ಟೇ, ಹೇಳಿದ್ದನ್ನು ನಾವು ನಂಬೋಕೆ ಆಗುತ್ತಾ – ಶಾಸಕ ನಾಗೇಂದ್ರ

 

ಇತ್ತ ಆಪರೇಷನ್ ಕಮಲ ಸುದ್ದಿ ಬೆನ್ನಲ್ಲೇ ಕಣ್ಮರೆಯಾಗಿದ್ದ, ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಹೊಸಪೇಟೆಯಲ್ಲಿ ದಿಢೀರ್ ಪ್ರತ್ಯಕ್ಷವಾಗಿ, ನಾನು ಮುಂಬೈಗೂ ಹೋಗಿಲ್ಲ. ಬೆಂಗಳೂರಿಗೂ ಹೋಗಿಲ್ಲ. ನನ್ನ ಇಬ್ಬರು ಮಕ್ಕಳು ಚಿಕ್ಕಮಗಳೂರಿನಲ್ಲಿ ಓದುತ್ತಿದ್ದಾರೆ. ಹೀಗಾಗಿ ಮಕ್ಕಳನ್ನು ನೋಡಲು ಹೋಗಿದ್ದೆ. ಎರಡು ದಿನ ನಾನು ಅಲ್ಲಿಯೇ ತಂಗಿದ್ದೆ ಎಂದು ಸ್ಪಷ್ಟನೆ ನೀಡಿದರು.

ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಅವರು ಮಾತನಾಡಿ, ಎಲ್ಲರೂ ಅಲ್ಲಲ್ಲಿ ಇದ್ವಿ ಅಷ್ಟೇ. ಕೆಲವರು ಏನೇನೋ ಹೇಳುತ್ತಾರೆ. ಅದನ್ನೆಲ್ಲಾ ನಾವು ನೀವು ನಂಬುವುದಕ್ಕೆ ಆಗುತ್ತಾ? ನಮ್ಮಿಂದ ಸರ್ಕಾರಕ್ಕೆ ಸಂಕಷ್ಟ ಇಲ್ಲ. ನಾವು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿ ಇದ್ದೇವೆ ಎಂದು ತಿಳಿಸಿದರು. ಇದನ್ನು ಓದಿ: ಅಪ್ಪ, ಮಕ್ಕಳು ಸಿಟ್ಟಾಗೋದು ಸಹಜ, ಹಾಗೆಂದ ಮಾತ್ರಕ್ಕೆ ಮನೆಯನ್ನು ಬಿಡಲು ಸಾಧ್ಯವೇ: ಶಿವರಾಂ ಹೆಬ್ಬಾರ್

ಉಳಿದಂತೆ ಶಾಸಕ ಭೀಮಾನಾಯ್ಕ್ ಬುಧವಾರ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿ, ನಾನು ಎಲ್ಲೂ ಹೋಗಿಲ್ಲ, ಈಗ ಬೆಂಗಳೂರಿನಲ್ಲೇ ಇದ್ದೇನೆ. ಇದೆಲ್ಲಾ ಸುಳ್ಳು, ಬರಿ ಊಹಾಪೋಹವಷ್ಟೇ. ನಾನು ಮಂಗಳವಾರ ಗೋವಾದಿಂದ ಬಂದಿದ್ದೀನೆ. ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವ ಯೋಚನೆ, ಪ್ರಯತ್ನ ಮಾಡಿಲ್ಲ ಎಂದಿದ್ದರು. ಅಲ್ಲದೇ ನಾನು ಫೋನ್ ಮೂಲಕ ಕಾಂಗ್ರೆಸ್ ನಾಯಕರ ಜೊತೆ ಮಾತನಾಡುತ್ತಿದ್ದೆ. ನಾನು ಗೋವಾಗೆ ಹೋಗಿದ್ದು, ಧಾರವಾಡದಲ್ಲಿ ಇರುವುದನ್ನು ಕೂಡ ಸಿದ್ದರಾಮಯ್ಯ ಅವರಿಗೆ ಮೊದಲೇ ಹೇಳಿದ್ದೆ ಎಂದು ತಿಳಿಸಿದ್ದರು.  ಇದನ್ನು ಓದಿ: ಕಣ್ಮರೆಯಾಗಿದ್ದ ಕಂಪ್ಲಿ ಶಾಸಕ ಹೊಸಪೇಟೆಯಲ್ಲಿ ದಿಢೀರ್ ಪ್ರತ್ಯಕ್ಷ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *