– 40 ಪರ್ಸೆಂಟ್ ಕಮಿಷನ್ ಆರೋಪದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ
ಬೆಂಗಳೂರು: ಖಾಸಗಿ ಶಾಲೆಗಳಿಂದಲೂ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿರುವುದಾಗಿ ಆರೋಪ ಕೇಳಿಬಂದ ಬೆನ್ನಲ್ಲೇ ಎಚ್ಚೆತ್ತ ರಾಜ್ಯಸರ್ಕಾರ ಅನಧಿಕೃತ ಖಾಸಗಿ ಶಾಲೆಗಳ ವಿರುದ್ಧ ಸಮರ ಸಾರಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಆಪರೇಷನ್ ಕ್ಲೀನ್ ಅಭಿಯಾನ ಶುರು ಮಾಡಿದ್ದು, ಅನುಮತಿಯಿಲ್ಲದೇ ನಡೆಸುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ರಾಜ್ಯದಲ್ಲಿ ನೂರಾರು ಅನಧಿಕೃತ ಖಾಸಗಿ ಶಾಲೆಗಳು ತಲೆ ಎತ್ತಿದ್ದು, ಅವುಗಳ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಬೆಂಗ್ಳೂರಿನ ಖಾಸಗಿ ಶಾಲೆಗಳಲ್ಲಿ ರಾಷ್ಟ್ರಗೀತೆಗೆ ಅಪಮಾನ
ದಾಖಲಾತಿ ಇಲ್ಲದ ಹಾಗೂ ಅನುಮತಿ ಪಡೆಯದೇ ನಡೆಸುತ್ತಿರೋ ಅನಧಿಕೃತ ಶಾಲೆಗಳ ವಿರುದ್ಧ ವರದಿ ಸಿದ್ಧಪಡಿಸಲಾಗಿದ್ದು, ಅಂತಹ ಶಾಲೆಗಳನ್ನು ಬಂದ್ ಮಾಡಲು ಇಲಾಖೆ ದಿಟ್ಟ ನಡೆ ತೆಗೆದುಕೊಂಡಿದೆ.
ಶಾಸಗಿ ಶಾಲೆಗಳಿಗೆ ಈ ನಿಯಮ ಕಡ್ಡಾಯ: ಖಾಸಗಿ ಶಾಲೆಗಳನ್ನು ಪ್ರಾರಂಭಿಸಲು ಕಡ್ಡಾಯವಾಗಿ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದಿರಬೇಕು. ಎನ್‌ಒಸಿ, ಕಟ್ಟಡ ಗುಣಮಟ್ಟದ ಪ್ರಮಾಣಪತ್ರ ಪಡೆದಿರಬೇಕು. ಶಿಕ್ಷಣ ಇಲಾಖೆ ನಿಯಮಗಳನ್ನ ಪಾಲನೆ ಮಾಡಬೇಕು. ಒಂದು ವೇಳೆ ಪಾಲನೆ ಮಾಡದೇ ಇರುವ ಯಾವುದೇ ಶಾಲೆಯಾದರೂ ಅವು ಅನಧಿಕೃತ ಶಾಲೆಗಳು ಎಂದೇ ಪರಿಗಣಿಸಲಾಗುತ್ತದೆ. ಇದನ್ನೂ ಓದಿ: ಖಾಸಗಿ ಶಾಲೆಗಳಿಗೆ ನಮ್ಮ ಶಾಲೆಗಳು ಪೈಪೋಟಿ ಕೊಡುವಂತೆ ಕೆಲಸ ಮಾಡುತ್ತೇವೆ: ಶ್ರೀರಾಮುಲು
ಸಿಬಿಎಸ್‌ಇ-ಐಸಿಎಸ್‌ಇ ಶಾಲೆಗಳು ಕಡ್ಡಾಯವಾಗಿ ಎನ್‌ಒಸಿ ರಾಜ್ಯ ಸರ್ಕಾರದಿಂದ ಪಡೆದಿರಬೇಕು. ಇಲ್ಲದೇ ಹೋದ್ರೆ ಅದು ಅನಧಿಕೃತ ಶಾಲೆಯಾಗುತ್ತದೆ. ಶಿಕ್ಷಣ ಇಲಾಖೆ ಕಾಲ ಕಾಲಕ್ಕೆ ಹೊರಡಿಸಿರೋ ನಿಯಮ ಅಳವಡಿಸಿಕೊಳ್ಳದೇ ಇದ್ದರೇ ಅಂತಹ ಶಾಲೆಗಳ ಮೇಲೂ ಕ್ರಮ. ಅನಧಿಕೃತ ಶಾಲೆಗಳ ಕುರಿತು ಪ್ರತಿ ಜಿಲ್ಲೆಗಳಲ್ಲಿ ವರದಿ ಸಿದ್ಧತೆ ಮಾಡಲಾಗುತ್ತಿದೆ. ವರದಿ ಬಂದ ಕೂಡಲೇ ಆ ಶಾಲೆಯ ಮುಂದೆ ಶಿಕ್ಷಣ ಇಲಾಖೆಯಿಂದ ಇದು ಅನಧಿಕೃತ ಶಾಲೆ ಎಂದು ಬೋರ್ಡ್ ಅಳವಡಿಸಲಾಗುತ್ತದೆ.
ಅಂತಹ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಡಿ ಎಂದೂ ಇಲಾಖೆ ಅಭಿಯಾನ ನಡೆಸಲಿದೆ. ಜೊತೆಗೆ ಅನಧಿಕೃತ ಶಾಲೆಗಳ ಸಂಸ್ಥೆಗಳನ್ನ ಕಪ್ಪುಪಟ್ಟಿಗೆ ಸೇರಿಸಲಿದೆ. ಕಾನೂನಾತ್ಮಕವಾಗಿ ಅನಧಿಕೃತ ಶಾಲೆಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರು ಹಾಗೂ ಶಿಕ್ಷಣ ಸಚಿವರು ತಿಳಿಸಿದ್ದಾರೆ.