ಮಹಿಳಾ ಪೊಲೀಸರು ಸೀರೆ ಉಡುವಂತಿಲ್ಲ, ಕೈ ತುಂಬ ಬಳೆ ತೊಡುವಂತಿಲ್ಲ: ಹೊಸ ಡ್ರೆಸ್ ಕೋಡ್‍ನಲ್ಲಿ ಏನಿದೆ?

Public TV
2 Min Read

ಬೆಂಗಳೂರು: ಕರ್ತವ್ಯ ನಿರತ ಮಹಿಳಾ ಪೊಲೀಸರು ಇನ್ನು ಮುಂದೆ ಸೀರೆಯ ಬದಲು ಪ್ಯಾಂಟು, ಶರ್ಟ್ ಕಡ್ಡಾಯವಾಗಿ ಧರಿಸಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಸುತ್ತೋಲೆ ಹೊರಡಿಸಿದ್ದಾರೆ.

ಈ ಸಂಬಂಧ ಅಕ್ಟೋಬರ್ 16 ರಂದು ಸುತ್ತೋಲೆ ಹೊರಡಿಸಲಾಗಿದ್ದು, ಈಗ ಇಲಾಖೆಯಲ್ಲೇ ಪರ ವಿರೋಧ ಚರ್ಚೆ ಆರಂಭವಾಗಿದೆ. ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮತ್ತು ಕೆಲವು ಅಧಿಕಾರಿಗಳ ಸೂಚನೆಯ ಮೇರೆಗೆ ಮಹಿಳಾ ಪೊಲೀಸರಿಗೆ ಖಾಕಿ ಸೀರೆಯ ಬದಲು ಪ್ಯಾಂಟು-ಶರ್ಟ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಇದರಿಂದ ಅಪರಾಧಗಳನ್ನ ತಡೆಯಲು ಸುಲಭವಾಗುತ್ತದೆ ಎಂದು ಎಂದು ಡಿಜಿ ನೀಲಮಣಿ ಎನ್ ರಾಜು ಹೇಳಿದ್ದಾರೆ.

ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಸರಗಳ್ಳತನ ಇತ್ಯಾದಿ ಅಪರಾಧಗಳನ್ನು ಎಸಗುವ ಆರೋಪಿಗಳನ್ನು ಹಿಡಿಯಲು ಸೀರೆ ತೊಟ್ಟ ಮಹಿಳಾ ಸಿಬ್ಬಂದಿಗೆ ಓಡಲು ಕಷ್ಟವಾಗುತ್ತದೆ ಇದರಿಂದ ಖಾಕಿ ಸೀರೆಯ ಬದಲು ಪ್ಯಾಂಟು-ಶರ್ಟ್ ಮತ್ತು ಬೂಟನ್ನು ಧರಿಸಿದ್ರೆ ಹೆಚ್ಚು ಅನುಕೂಲವಾಗುತ್ತದೆ ಎನ್ನುವ ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಈ ಸುತ್ತೋಲೆಯನ್ನು ಹೊರಡಿಸಲಾಗಿದೆ.

ಈ ಸಂಬಂಧ ಹಿರಿಯ ಅಧಿಕಾರಿಗಳು ಸೇರಿದಂತೆ ಮಹಿಳಾ ಪೊಲೀಸರ ಜೊತೆ ಮಾತುಕತೆ ನಡೆಸಿದ್ದೇವೆ. ಕರ್ತವ್ಯ ನಿರ್ವಹಿಸುವ ಮಹಿಳಾ ಪೊಲೀಸರು ಪ್ಯಾಂಟು, ಶರ್ಟ್ ಧರಿಸುವುದು ಕಡ್ಡಾಯ ಎನ್ನುವ ಕಾನೂನು ಮೊದಲಿನಿಂದಲೇ ಇದೆ. ಆದರೆ ಅದನ್ನು ಕೆಲವು ಬದಲಾವಣೆಯೊಂದಿಗೆ ಈಗ ಜಾರಿಗೆ ತರುತ್ತಿದ್ದೇವೆ ಅಷ್ಟೇ ಎಂದು ನೀಲಮಣಿ ರಾಜು ಸ್ಪಷ್ಟನೆ ನೀಡಿದ್ದಾರೆ.

ಹೊಸ ಡ್ರೆಸ್ ಕೋಡ್‍ನಲ್ಲಿ ಹೇಗಿರಬೇಕು?

ಪ್ಯಾಂಟು-ಶರ್ಟು, ಬೆಲ್ಟ್ ಮತ್ತು ಬೂಟ್ಸ್ ಇರುವ ಸಮವಸ್ತ್ರವನ್ನು ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಧರಿಸಬೇಕು. ತಲೆ ಕೂದಲನ್ನು ಇಳಿಬಿಟ್ಟು ಓಡಾಡುವಂತಿಲ್ಲ, ಹೂವನ್ನ ಮುಡಿಯುವಂತಿಲ್ಲ, ಕಪ್ಪು ಬಣ್ಣವನ್ನ ಬಿಟ್ಟರೆ ಬೇರೆ ಯಾವ ಬಣ್ಣವನ್ನು ಕೂದಲಿಗೆ ಹಾಕುವಂತಿಲ್ಲ. ಕೂದಲನ್ನು ಗಂಟು ಕಟ್ಟಿ, ಕಪ್ಪು ಬಣ್ಣದ ನೆಟ್ ಬ್ಯಾಂಡ್ ಕಟ್ಟಿ ಹೇರ್ ಕ್ಲಿಪ್ ಹಾಕಬೇಕು. ಚಿಕ್ಕದಾದ ಕಿವಿಯೋಲೆ ಹಾಕಬಹುದು. ಬಿಂದಿ ಚಿಕ್ಕದಾಗಿರಬೇಕು. ಕೈಗಳಿಗೆ ತಲಾ ಒಂದು ಬಳೆಯನ್ನ ಹಾಕಬಹುದು.

ಸಿಬ್ಬಂದಿಯಿಂದ ವಿರೋಧ:
ಹೊಸ ಡ್ರೆಸ್ ಕೋಡ್‍ಗೆ ಕೆಲ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದ್ದು, ದಪ್ಪಗಿರುವ ಮಹಿಳೆಯರು ಪ್ಯಾಂಟು ಶರ್ಟ್ ಹಾಕಿಕೊಂಡು ಓಡಾಡುವುದು ಕಷ್ಟವಾಗುತ್ತದೆ ಎಂದಿದ್ದಾರೆ. ಅಲ್ಲದೇ 40 ವರ್ಷ ದಾಟಿದ ಮಹಿಳಾ ಸಿಬ್ಬಂದಿಗೆ ಈ ಆದೇಶದಿಂದ ರಿಯಾಯಿತಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Share This Article
Leave a Comment

Leave a Reply

Your email address will not be published. Required fields are marked *