ಟಿಕೆಟ್ ಕಳೆದುಕೊಂಡು ವರ್ಷವಾಯ್ತು, ಜನರ ಆಶೀರ್ವಾದ ಇವತ್ತಿಗೂ ಹಾಗೇ ಇದೆ: ಪ್ರತಾಪ್‌ ಸಿಂಹ

Public TV
1 Min Read

ಮೈಸೂರು: ಎಂಪಿ ಟಿಕೆಟ್ ಕಳೆದುಕೊಂಡು ಇವತ್ತಿಗೆ ಒಂದು ವರ್ಷವಾಯ್ತು ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ (Pratap Simha) ಹೇಳಿಕೊಂಡಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿಕೊಂಡಿರುವ ಅವರು, ಟಿಕೆಟ್‌ ಕೈ ತಪ್ಪಿ ಒಂದು ವರ್ಷ ಆಯ್ತು. ಕಾರ್ಯಕರ್ತರ ಪ್ರೀತಿ, ಜನರ ಆಶೀರ್ವಾದ ಇವತ್ತಿಗೂ ಹಾಗೇ ಇದೆ. ಜನರು ಕೊಟ್ಟಿರುವ ಈ ಶಕ್ತಿಯಿಂದಲೇ ಇವತ್ತಿಗೂ ಸೈದ್ಧಾಂತಿಕ ಕೆಲಸ ಮತ್ತು ಹೋರಾಟವನ್ನು ಮಾಡುತ್ತಿದ್ದೇನೆ. 8 FIR ಹಾಕಿಸಿಕೊಂಡರೂ ಇದನ್ನೆಲ್ಲ ಮುಂದುವರಿಸುತ್ತಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದ ಹೀಗೇ ನಿರಂತರವಾಗಿರಲಿ ಎಂದು ಬರೆದುಕೊಂಡಿದ್ದಾರೆ.

ಕಳೆದ ಎಂಪಿ ಚುನಾವಣೆಯಲ್ಲಿ ಮೈಸೂರು (Mysuru) ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗುವ ವಿಶ್ವಾಸವನ್ನು ಪ್ರತಾಪ್‌ ಸಿಂಹ ವ್ಯಕ್ತಪಡಿಸಿದ್ದರು. ಟಿಕೆಟ್ ಸಿಗದಿದ್ದರೆ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಹೇಳಿಕೊಂಡಿದ್ದರು. ಇನ್ನೂ ಟಿಕೆಟ್‌ ಕೈತಪ್ಪುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಅವರಿಗೆ ಟಿಕೆಟ್‌ ನೀಡುವಂತೆ ಅಭಿಯಾನಗಳು ಸಹ ನಡೆದಿದ್ದವು.

ಅಂತಿಮವಾಗಿ ಬಿಜೆಪಿ ಹೈಕಮಾಂಡ್‌ ಯದುವೀರ್‌ ಒಡೆಯರ್‌ ಅವರಿಗೆ ಟಿಕೆಟ್‌ ನೀಡಿತ್ತು. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು, ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ್‌ (M.Lakshmana) ವಿರುದ್ಧ 1.30 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದರು. ಇದರಿಂದ ತವರಲ್ಲೇ ಸಿಎಂಗೆ ಮುಖಭಂಗವಾಗಿತ್ತು.

Share This Article