ವಿಶ್ವದಲ್ಲೇ ನಾಲ್ಕನೇ ಕೇಂದ್ರ -ಹೊಸ ದಾಖಲೆ ಬರೆದ ಕೈಗಾ ಅಣು ವಿದ್ಯುತ್ ಸ್ಥಾವರ

Public TV
2 Min Read

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರವು 766 ದಿನಗಳಿಂದ ನಿರಂತರ ವಿದ್ಯುತ್ ಉತ್ಪಾದನೆ ನಡೆಸುವ ಮೂಲಕ ದೇಶದಲ್ಲೇ ಮೊದಲ ನಿರಂತರ ವಿದ್ಯುತ್ ಉತ್ಪಾದನಾ ಘಟಕವಾಗಿದ್ದು, ವಿಶ್ವದಲ್ಲೇ ನಾಲ್ಕನೇ ಕೇಂದ್ರ ಎಂಬ ಹೊಸ ದಾಖಲೆ ನಿರ್ಮಿಸಿದೆ.

ಕೈಗಾದಲ್ಲಿ ಸೆಪ್ಟೆಂಬರ್ 2000 ನೇ ಇಸವಿಯಲ್ಲಿ ಮೊದಲ ಯೂನಿಟ್ ಪ್ರಾರಂಭವಾಗಿದ್ದು, ಪ್ರಸಕ್ತ ನಾಲ್ಕು ಯೂನಿಟ್ ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಯೂನಿಟ್ 220 ಮೆಗಾವ್ಯಾಟ್ ಉತ್ಪಾದಿಸುವ ಸಾಮರ್ಥ್ಯ ವಿದ್ದು, 2016 ರಿಂದ 4019 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿದೆ. 2000 ನೇ ಇಸವಿಯಲ್ಲಿ ಪ್ರಾರಂಭವಾದ ಮೊದಲ ಯೂನಿಟ್, ಈವರೆಗೆ 25 ಸಾವಿರ ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಿದೆ.

ಯೂನಿಟ್ 2,3 ಸತತ 464 ದಿನ, 4ನೇ ಯೂನಿಟ್ 525 ದಿನಗಳ ಕಾಲ ಕಾರ್ಯನಿರ್ವಹಿಸಿವೆ. ಮೊದಲ ಯೂನಿಟ್ 2016ರ ಮೇ 13 ರಂದು ಬೆಳಗ್ಗೆ 9:20 ಕ್ಕೆ ವಿದ್ಯುತ್ ಉತ್ಪಾದನೆಗೆ ಪ್ರಾರಂಭಿಸಿದ್ದು, ಅಂದಿನಿಂದ ನಿರಂತರವಾಗಿ ಚಾಲನೆಯಿದೆ. ಈ ಮೂಲಕ ರಾಜಸ್ಥಾನದ ರಾವತ್ ಭಾಟದಲ್ಲಿರುವ ಅಣು ವಿದ್ಯುತ್ ಕೇಂದ್ರದ ದಾಖಲೆಯನ್ನು ಹಿಂದಿಕ್ಕಿದೆ. ರಾವತ್ ಭಾಟದ ಕೇಂದ್ರದ 5ನೇ ಘಟಕವು 2012ರ ಆಗಸ್ಟ್ 2 ರಿಂದ 2014 ರ ಸೆಪ್ಬೆಂಬರ್ 17ರವರೆಗೆ ಒಟ್ಟು 765 ದಿನ ನಿರಂತರ ಚಾಲನೆಯಲ್ಲಿತ್ತು.

ದೇಶದಲ್ಲಿ ಅಣು ಶಕ್ತಿ ಆಧರಿಸಿ ಅತೀ ಹೆಚ್ಚು ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುವ ಮೂರನೇ ದೊಡ್ಡ ಕೇಂದ್ರ ಎಂಬ ಹೆಗ್ಗಳಿಕೆಗೆ ಕೈಗಾ ಪಾತ್ರವಾಗಿದೆ. ಈ ಕೇಂದ್ರವನ್ನು ದಕ್ಷಿಣ ಪವರ್ ಗ್ರಿಡ್ ಗೆ ಸಂಪರ್ಕಿಸಲಾಗಿದ್ದು, ನಮ್ಮ ರಾಜ್ಯ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ಹಾಗೂ ಪುದುಚೇರಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.

767 ದಿನಗಳ ಕಾಲ ನಿರಂತರವಾಗಿ ವಿದ್ಯುತ್ ಉತ್ಪಾದನೆಯನ್ನ ಮಾಡಿದ ಮೊದಲ ಘಟಕ ಎನ್ನುವ ಹೆಗ್ಗಳಿಕೆ ಪಡೆದಿದೆ. ಪ್ರಪಂಚದಲ್ಲಿಯೇ ನಾಲ್ಕನೇ ಘಟಕ ಅನ್ನುವ ದಾಖಲೆಯನ್ನ ಸಹ ಇದೀಗ ಕೈಗಾ ಪಡೆದಿದೆ. ಇಂಗ್ಲೆಂಡ್ ನ ಹೇಶಮ್ ಸ್ಥಾವರದಲ್ಲಿ 940 ದಿನಗಳ ಕಾಲ ವಿದ್ಯುತ್ ಉತ್ಪಾದಿಸಿ ಮೊದಲ ಸ್ಥಾನದಲ್ಲಿ ಇದ್ದರೆ, ಕೆನಡಾದ ಒಂಟಾರಿಯಾದಲ್ಲಿರುವ ಪಿಕರಿಕ್ ಸ್ಥಾವರದಲ್ಲಿ 894 ದಿನ ಉತ್ಪಾದಿಸಿ ಎರಡನೇ ಸ್ಥಾನ ಪಡೆದಿತ್ತು. ಸ್ಕಾಟ್ಲೆಂಡ್ ನ ಟೋರ್ನೆಸ್ ಸ್ಥಾವರದಲ್ಲಿ 825 ದಿನಗಳ ಕಾಲ ವಿದ್ಯುತ್ ಉತ್ಪಾದನೆ ಮಾಡಿ ಮೂರನೇ ಸ್ಥಾನದಲ್ಲಿತ್ತು. ಇದೀಗ ನಾಲ್ಕನೇ ಸ್ಥಾನದಲ್ಲಿ ಕೈಗಾ ಸೇರ್ಪಡೆಯಾಗಿದೆ. ಇನ್ನು ಒಟ್ಟು ಸುಮಾರು 1530 ಸಿಬ್ಬಂದಿಗಳು ಈ ಸಾಧನೆಯಲ್ಲಿ ಕಾರ್ಯನಿರ್ವಹಿಸಿದ್ದು, ಇದು ಇಡೀ ದೇಶಕ್ಕೆ ಹೆಮ್ಮೆಯನ್ನ ತಂದಿದೆ ಎಂದು ಕೈಗಾ ಅಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೈಗಾದಲ್ಲಿ ನಾಲ್ಕು ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆಯನ್ನ ಮಾಡಲಾಗುತ್ತಿದ್ದು, ಮೊದಲ ಸ್ಥಾವರ 767 ದಿನಗಳ ಕಾಲ ವಿದ್ಯುತ್ ಉತ್ಪಾದನೆ ಮಾಡಿದರೆ, ಎರಡನೇ ಸ್ಥಾವರ, 464 ದಿನ, ಮೂರನೇ ಸ್ಥಾವರ 467ದಿನ ಹಾಗೂ ನಾಲ್ಕನೇ ಸ್ಥಾವರ 550 ದಿನಗಳಿಂದ ನಿರಂತರವಾಗಿ ವಿದ್ಯುತ್ ಉತ್ಪಾದನೆಯನ್ನ ಮಾಡಲಾಗುತ್ತಿದೆ. ಪ್ರತಿ ಘಟಕದಲ್ಲಿ 220 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯನ್ನ ಮಾಡುತ್ತಿದ್ದು, ದೇಶದಲ್ಲಿಯೇ ಪ್ರಮುಖ ಘಟಕದ ಸಾಲಿಗೆ ಕೈಗಾ ಅಣು ವಿದ್ಯುತ್ ಸ್ಥಾವರ ಸೇರ್ಪಡೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *