ಒನ್ ಸೈಡ್ ಲವ್- ಮದುವೆ ನಿಶ್ಚಯವಾಯಿತೆಂದು ಯುವತಿಯನ್ನೇ ಕೊಂದ

Public TV
1 Min Read

ಲಕ್ನೋ: ಮದುವೆ ನಿಶ್ಚಯವಾಯಿತೆಂದು ಭಗ್ನ ಪ್ರೇಮಿಯೊಬ್ಬ ಹುಡುಗಿಯನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಅಲೀಘರ್ ಜಿಲ್ಲೆಯ ಇಗ್ಲಾಸ್‍ನಲ್ಲಿ ನಡೆದಿದೆ.

ಜರೋಥ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಯುವತಿಯು ಬೇರೆ ಯುವಕನನ್ನು ಮದುವೆಯಾಗುತ್ತಿರುವುದನ್ನು ತಿಳಿದು ಕೋಪಿತನಾಗಿ ಆರೋಪಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿಯ ಮದುವೆ ಡಿಸೆಂಬರ್ 15ರಂದು ನಿಗದಿಯಾಗಿತ್ತು. ಇದನ್ನು ತಿಳಿದ ಆರೋಪಿ ಯುವತಿಯ ತಂದೆ ಹಾಗೂ ಸಹೋದರ ಕೆಲಸಕ್ಕೆ ತೆರಳಿದಾಗ ಕೊಲೆ ಮಾಡಿದ್ದಾನೆ. ಮನೆಯವರೆಲ್ಲರೂ ದಿನದ ಕೆಲಸ ಮುಗಿಸಿ ಮರಳಿದರೂ ಯುವತಿ ಕಾಣದ್ದನ್ನು ಕಂಡು ಕುಟುಂಬಸ್ಥರು ಗಾಬರಿಯಾಗಿದ್ದರು.

ನಂತರ ಯುವತಿಯನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಬಟ್ಟೆ ಒಣಗಿಸಲು ಮನೆಯ ಮೇಲಿನ ಮಹಡಿ ತೆರಳಿದ್ದಳು ಎಂದು ಯುವತಿಯ ಅತ್ತಿಗೆ ಕುಟುಂಬದ ಸದಸ್ಯರಿಗೆ ತಿಳಿಸಿದ್ದಾಳೆ. ಎಲ್ಲರೂ ಟೆರೇಸ್ ಮೇಲೆ ಹುಡುಕಲು ಪ್ರಾರಂಭಿಸಿದ್ದು, ಮನೆಯ ಮೊದಲನೇ ಮಹಡಿಯಲ್ಲಿ ಯುವತಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ಆಗ ನೆರೆಯ ಮನೆಯ ರಾಹುಲ್ ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಶಂಕಿಸಿದ್ದಾರೆ.

ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದೇವೆ. ಬಂಧಿಸಲು ಎರಡು ತಂಡಗಳನ್ನು ರಚಿಸಲಾಗಿದೆ. ಯುವತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಲೀಘರ್ ಎಸ್‍ಎಸ್‍ಪಿ ಆಕಾಶ್ ಕುಲ್ಹಾರಿ ಮಾಹಿತಿ ನೀಡಿದ್ದಾರೆ.

ಆರೋಪಿ ರಾಹುಲ್ ತನ್ನ ಕುಟುಂಬದ ಸದಸ್ಯರೊಂದಿಗೆ ಪರಾರಿಯಾಗಿದ್ದು, ಸಂತ್ರಸ್ತೆಯ ಕುಟುಂಬದ ಸದಸ್ಯರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಡಿಸೆಂಬರ್ 15ರಂದು ಯುವತಿಯ ಮದುವೆ ನಡೆಯಬೇಕಿತ್ತು. ಇದಕ್ಕಾಗಿ ಕುಟುಂಬಸ್ಥರು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು.

ಈ ಕುರಿತು ಪೊಲೀಸರು ಮಾತನಾಡಿ, ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಶೀಘ್ರವೇ ಬಂಧಿಸಲಾಗುವುದು. ಆರೋಪಿಯು ಯುವತಿಯ ಮದುವೆ ನಿಶ್ಚಯವಾಗಿದ್ದರಿಂದ ಬೇಸರಗೊಂಡಿದ್ದ. ಅಲ್ಲದೆ ಮದುವೆ ನಿಶ್ಚಯವಾದಾಗಿನಿಂದ ಯುವತಿಗೆ ಕಿರುಕುಳ ನೀಡುತ್ತಿದ್ದ ಎಂದು ಕುಟುಂಬಸ್ಥರು ನಮಗೆ ತಿಳಿಸಿದ್ದಾರೆ. ಆರೋಪಿಯು ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಯುವತಿ ಅವನನ್ನು ಪ್ರೀತಿಸುತ್ತಿರಲಿಲ್ಲ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *