Plane Crash | ಟಾಟಾ ಗ್ರೂಪ್ ಇತಿಹಾಸದ ಕರಾಳ ದಿನಗಳಲ್ಲಿ ಇದೂ ಒಂದು – ಸಂಸ್ಥೆಯ ಅಧ್ಯಕ್ಷರಿಂದ ಭಾವುಕ ಪತ್ರ

Public TV
2 Min Read

ನವದೆಹಲಿ: ಅಹಮದಾಬಾದ್‌ನಲ್ಲಿ ನಡೆದ ಘೋರ ವಿಮಾನ ದುರಂತ (Ahmedabad Plane Crash), ಟಾಟಾ ಗ್ರೂಪ್‌ (Tata Group) ಇತಿಹಾಸದ ಕರಾಳ ದಿನಗಳಲ್ಲಿ ಇದು ಸಹ ಒಂದು ಎಂದು ಸಂಸ್ಥೆಯ ಅಧ್ಯಕ್ಷ ಎನ್.ಚಂದ್ರಶೇಖರನ್ ತಮ್ಮ ಸಹೋದ್ಯೋಗಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪತ್ರದಲ್ಲಿ ಏನಿದೆ?
ವಿಮಾನ ದುರಂತ ಸಂಭವಿಸಿದೆ. ಈಗ ಮೃತಪಟ್ಟವರ ಕುಟುಂಬಸ್ಥರಿಗೆ ನಮ್ಮ ಮಾತುಗಳು ಸಮಾಧಾನ ನೀಡುವುದಿಲ್ಲ. ಆದರೆ ಅಪಘಾತದಲ್ಲಿ ಮೃತಪಟ್ಟ ಮತ್ತು ಗಾಯಗೊಂಡ ಜನರ ಜೊತೆ ಹಾಗೂ ಅವರ ಕುಟುಂಬದವರೊಂದಿಗೆ ನಾವು ಇರುತ್ತೇವೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಪತನ: ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಬೆಂಕಿ ಬಿದ್ದರೂ ಸುಟ್ಟು ಹೋಗಿಲ್ಲ ಯಾಕೆ?

ವಿಮಾನ ಅಪಘಾತದ ತನಿಖೆಗೆ ನಮ್ಮ ದೇಶದ ತನಿಖಾ ತಂಡಗಳು ಸೇರಿದಂತೆ, ಬ್ರಿಟನ್ ಮತ್ತು ಅಮೆರಿಕದ ತನಿಖಾ ತಂಡಗಳು ಅಹಮದಾಬಾದ್‌ಗೆ ಬಂದಿವೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಂತೆ, ನಾವು ಸಹ ಏನಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಕಾಯುತ್ತಿದ್ದೇವೆ. ತನಿಖಾ ತಂಡಗಳಿಗೆ ಸಂಪೂರ್ಣ ಸಹಕಾರವನ್ನು ನೀಡುತ್ತೇವೆ. ನೊಂದ ಕುಟುಂಬಗಳು ಮತ್ತು ಪೈಲಟ್‌ ಮತ್ತು ಸಿಬ್ಬಂದಿಗೆ ನಮ್ಮ ಸಂಸ್ಥೆ ಋಣಿಯಾಗಿದೆ. ಟಾಟಾ ಗ್ರೂಪ್ ಸಮಾಜದ ಬಗ್ಗೆ ತನ್ನ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸುತ್ತದೆ.

ಅಪಘಾತಕ್ಕೆ ಕಾರಣ ಹುಡುಕುವುದು ಮಾನವನ ಪ್ರವೃತ್ತಿಯಾಗಿದೆ. ನಮ್ಮ ಸುತ್ತಲೂ ಸಾಕಷ್ಟು ಊಹಾಪೋಹಗಳಿವೆ. ಅದರಲ್ಲಿ ಕೆಲವು ಸರಿಯಾಗಿರಬಹುದು, ಕೆಲವು ತಪ್ಪಾಗಿರಲೂಬಹುದು. ತನಿಖೆಯ ಬಳಿಕ ನಿಜಾಂಶ ತಿಳಿಯಲಿದೆ.

ಟಾಟಾ ಗ್ರೂಪ್ ಜನವರಿ 2022 ರಲ್ಲಿ 2.2 ಬಿಲಿಯನ್ ಡಾಲರ್‌ ಒಪ್ಪಂದದ ಮೂಲಕ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವನ್ನು (Air India) ಖರೀದಿಸಿತ್ತು. ಇದಾದ ಬಳಿಕ ಅದರಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಮೊದಲ ಮತ್ತು ಪ್ರಮುಖ ಆದ್ಯತೆಯಾಗಿದೆ. ಅದರಲ್ಲಿ ಯಾವುದೇ ರಾಜಿ ಇಲ್ಲ. ನಾವು ನಮ್ಮ ಜವಾಬ್ದಾರಿಗಳಿಂದ ಹಿಂದೆ ಸರಿಯುವುದಿಲ್ಲ. ಈ ನಷ್ಟವನ್ನು ನಾವು ಭರಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.

ಗುರುವಾರ ಅಹಮದಾಬಾದ್‍ನಲ್ಲಿ ಅಪಘಾತಗೊಂಡ ಏರ್ ಇಂಡಿಯಾ ವಿಮಾನದಲ್ಲಿ 10 ಮಂದಿ ಸಿಬ್ಬಂದಿ ಸೇರಿ 242 ಜನ ಇದ್ದರು. ಈ ಅವಘಡದಲ್ಲಿ 241 ಜನ ಸಾವನ್ನಪ್ಪಿದ್ದಾರೆ. ಓರ್ವ ಮಾತ್ರ ಪವಾಡ ಸದೃಶ್ಯವಾಗಿ ಬದುಕುಳಿದಿದ್ದಾರೆ. ಇದನ್ನೂ ಓದಿ: ವಿಮಾನ ದುರಂತ | ನಾನು ನನ್ನ ಪ್ರೀತಿ ಕಳೆದುಕೊಂಡೆ – ಆಸ್ಪತ್ರೆ ಮುಂದೆ ಯುವಕನ ಕಣ್ಣೀರು

Share This Article