ಬ್ಯಾಂಕ್ ಛಾವಣಿ ಕುಸಿದು ಓರ್ವ ಸಾವು, 10 ಜನರಿಗೆ ಗಾಯ

Public TV
1 Min Read

ಮುಂಬೈ: ಬ್ಯಾಂಕ್ ಅಫ್ ಮಹಾರಾಷ್ಟ್ರದ ಶಾಖೆಯೊಂದರ ಮೇಲ್ಛಾವಣಿ ಕುಸಿದು ಓರ್ವ ಮೃತಪಟ್ಟು, 10 ಜನ ಗಂಭೀರ ಗಾಯಗೊಂಡ ಘಟನೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದಿದೆ.

ಬೆಳಗ್ಗೆ 11ಕ್ಕೆ ವ್ಯವಹಾರ, ವಹಿವಾಟು ಜೋರಾಗಿ ನಡೆಯುತಿತ್ತು. ಗ್ರಾಹಕರು ಹೆಚ್ಚಿದ್ದ ಸಂದರ್ಭದಲ್ಲೇ ಬ್ಯಾಂಕಿನ ಮೇಲ್ಛಾವಣಿ ಕುಸಿದಿದೆ ಎಂದು ಕರ್ಮಲಾ ಪೊಲೀಸ್ ಠಾಣೆಯ ತನಿಖಾಧಿಕಾರಿ ಶ್ರೀಕಾಂತ್ ಪದುಲೆ ಅವರು ತಿಳಿಸಿದ್ದಾರೆ.

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಟ್ಟಡದ ಸುತ್ತಲಿನ ಪ್ರದೇಶ ಹಾನಿಯಾಗಿತ್ತು. ಇಂದು ಇದ್ದಕ್ಕಿದ್ದಂತೆ ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಹತ್ತಾರು ಗ್ರಾಹಕರು ಹಾಗೂ ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಬಲೆ ಹಾಕಿದಂತಾಗಿತ್ತು.

ಸಾವನ್ನಪ್ಪಿದವರನ್ನು ಪ್ರಶಾಂತ್ ಬಗಾಲ್(40) ಎಂದು ಗುರುತಿಸಲಾಗಿದ್ದು, ಕ್ಯಾಷ್ ಕೌಂಟರ್ ಬಳಿ ನಿಂತಿದ್ದಾಗ ಮೇಲ್ಛಾವಣಿ ಕುಸಿದು ಬಿದ್ದಿದೆ. ಕಟ್ಟದ ಅವಶೇಷದಡಿ ಸಿಲುಕಿಕೊಂಡಿದ್ದ 10 ಜನರನ್ನು ರಕ್ಷಿಸಲಾಗಿದ್ದು, ಗಂಭೀರ ಗಾಯಗೊಂಡಿದ್ದಾರೆ ಎಂದು ಶ್ರೀಕಾಂತ್ ಪದುಲೆ ತಿಳಿಸಿದ್ದಾರೆ.

ಇನ್ನೂ 10 ಜನರು ಕಟ್ಟಡದ ಅವಶೇಷದ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇರುವುದರಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಬ್ಯಾಂಕ್ ಅಲ್ಲದೆ, ಮೊದಲ ಮಹಡಿ ಕ್ಲಿನಿಕ್‍ನಲ್ಲಿದ್ದ ಕೆಲವು ರೋಗಿಗಳೂ ಸಹ ಸಿಲುಕೊಂಡಿರುವ ಶಂಕೆ ಇದೆ.

Share This Article
Leave a Comment

Leave a Reply

Your email address will not be published. Required fields are marked *