ಪ್ರಿಯತಮೆ ಹುಡುಕಾಟದಲ್ಲಿ ವಿನಯ್ ರಾಜ್‌ಕುಮಾರ್- ‘ಒಂದು ಸರಳ ಪ್ರೇಮಕಥೆ’ ಚಿತ್ರದ ಸಾಂಗ್ ರಿಲೀಸ್

Public TV
1 Min Read

ಒಂದು ಸರಳ ಪ್ರೇಮಕಥೆಯ ರೂವಾರಿ ಸಿಂಪಲ್ ಸುನಿ (Simple Suni) ಹೊಸ ವರ್ಷಕ್ಕೆ ಸಂಗೀತ ಪ್ರಿಯರಿಗೆ ಚೆಂದದ ಹಾಡನ್ನು ಉಡುಗೊರೆಯಾಗಿ ನೀಡಿದ್ದಾರೆ. ‘ನೀನ್ಯಾರೆಲೆ ನಿನಗಾಗಿಯೇ ಈ ಜೀವ ಭಾವ ಸೋಜಿಗ’ ಎಂಬ ಕ್ಯಾಚಿ ಮ್ಯಾಚಿ ಸಾಹಿತ್ಯದ ಮೆಲೋಡಿ ಮಸ್ತಿಯನ್ನು ರಿಲೀಸ್ ಮಾಡಿದ್ದಾರೆ. ಸಿದ್ದು ಕೋಡಿಪುರ ಹಾಗೂ ಸುನಿ ಸಾಹಿತ್ಯದ ಈ ಹಾಡಿಗೆ ಅರ್ಮಾನ್ ಮಲಿಕ್ ಧ್ವನಿಯಾಗಿದ್ದಾರೆ.

ಇದೇ ಮೊದಲ ಬಾರಿಗೆ ದೊಡ್ಮನೆಯ ಹೀರೋ ವಿನಯ್ ರಾಜ್ ಕುಮಾರ್ ಗೆ (Vinay Rajkumar) ಸಿಂಪಲ್ ಸುನಿ ನಿರ್ದೇಶನ ಮಾಡಿದ್ದಾರೆ. ವಿನಯ್ ನಾಯಕನಾಗಿ ನಟಿಸಿರುವ ಚಿತ್ರಕ್ಕೆ ಸ್ವಾತಿಷ್ಠ ಕೃಷ್ಣನ್, ‘ರಾಧಾ ಕೃಷ್ಣ’ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ (Malika Singh) ಎಂಬ ಇಬ್ಬರು ಚೆಲುವೆಯರ ನಾಯಕಿಯಾರಾಗಿ ನಟಿಸಿದ್ದಾರೆ.

ರಾಘವೇಂದ್ರ ರಾಜ್ ಕುಮಾರ್ (Raghavendra Rajkumar) ಸ್ಪೆಷಲ್ ರೋಲ್ ನಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರು ತಾರಾಬಳಗದಲ್ಲಿದ್ದಾರೆ. ಆದಿ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ನೀಡುತ್ತಿದ್ದು, ಕಾರ್ತಿಕ್ ಕ್ಯಾಮೆರಾ ಹಿಡಿದಿದ್ದಾರೆ. ಇದನ್ನೂ ಓದಿ:ಶಿವಣ್ಣ ನಟನೆಯ 131ನೇ ಸಿನಿಮಾದ ಪೋಸ್ಟರ್ ಹಂಚಿಕೊಂಡ ಟೀಮ್

ತಮ್ಮ ವಿಭಿನ್ನ ಸಿನಿಮಾಗಳಿಂದ ನಿರ್ದೇಶಕ ಸಿಂಪಲ್ ಸುನಿ ಗಮನ ಸೆಳೆಯುತ್ತಾ ಬರ್ತಿದ್ದಾರೆ. ‘ಅವತಾರ್ ಪುರುಷ’ ಬಳಿಕ ಸುನಿ ‘ಗತವೈಭವ’ ಸಿನಿಮಾ ಕೈಗೆತ್ತಿಕೊಂಡಿದ್ದರು. ಬಳಿಕ ಸದ್ದಿಲ್ಲದೇ ‘ಒಂದು ಸರಳ ಪ್ರೇಮಕಥೆ’ ಶುರು ಮಾಡಿದ್ದಾರೆ. ಇದೀಗ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಬಿಡುಗಡೆಗೆ ಸಜ್ಜಾಗಿದೆ. ಅಂದಹಾಗೇ ಈ ಸಿನಿಮಾಗೆ ಮೈಸೂರು ರಮೇಶ್ ನಿರ್ಮಾಣ ಮಾಡಿದ್ದಾರೆ.

Share This Article