ಹೊರಬಂತು ಒಂದು ಕಥೆ ಹೇಳ್ಲಾ ಚಿತ್ರದ ನಶೆಯ ಸೋಬಾನೆ!

Public TV
1 Min Read

ಚಿತ್ರೀಕರಣದ ಹಂತದಿಂದ ಇಲ್ಲಿಯವರೆಗೂ ಭರ್ಜರಿ ಕುತೂಹಲದ ಒಡ್ಡೋಲಗದಲ್ಲಿಯೇ ಸಾಗಿ ಬಂದಿರೋ ಚಿತ್ರ ಒಂದು ಕಥೆ ಹೇಳ್ಲಾ. ಇದೇ ಮಾರ್ಚ್ 8ರಂದು ಅದ್ಧೂರಿಯಾಗಿ ತೆರೆ ಕಾಣಲಿರೋ ಈ ಸಿನಿಮಾದ ಹಾಡೊಂದು ಇದೀಗ ಬಿಡುಗಡೆಯಾಗಿದೆ. ಹೊರ ಬಂದ ಮರುಕ್ಷಣದಿಂದಲೇ ವೇಗವಾಗಿ ಎಲ್ಲರನ್ನು ತಲುಪಿಕೊಂಡು ಮೆಚ್ಚುಗೆಯನ್ನೂ ಗಳಿಸಿಕೊಳ್ಳುತ್ತಿದೆ.

ಸೋಬಾನೆಂಬೋದೇ ಶಿವನೀಗೆ ಎಂದು ಶುರುವಾಗೋ ಈ ಹಾಡು ಯುವ ಸಮುದಾಯಕ್ಕೆ ನಶೆಯೇರಿಸೋ ರೀತಿಯಲ್ಲಿ ಮೂಡಿ ಬಂದಿದೆ. ಬಕೇಶ್ ಮತ್ತು ಕಾರ್ತಿಕ್ ಸಂಗೀತ ಸಂಯೋಜನೆ ಮಾಡಿರೋ ಈ ಹಾಡಿಗೆ ಶಿವಕುಮಾರ್ ಶೆಟ್ಟಿ ಯುವ ಆವೇಗದ ಸಾಹಿತ್ಯ ಬರೆದಿದ್ದಾರೆ. ತಮಿಳಿನ ವಿಕ್ರಂ ವೇದಾ ಫೇಮಿನ ಶಿವಂ ನಶೆಯೇರಿಸುವಂಥಾ ಕಂಠಸಿರಿಯಲ್ಲಿ ಇದನ್ನು ಹಾಡಿದ್ದಾರೆ. ಈ ಮೂಲಕ ಒಂದ ಕಥೆ ಹೇಳ್ಲಾ ಎಂಬ ಹಾರರ್ ಚಿತ್ರದ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ಆರಂಭವಾಗಿದೆ.

ಹಾರರ್ ಕಥೆಗಳತ್ತ ಪ್ರೇಕ್ಷಕರಲ್ಲೊಂದು ಕ್ಯೂರಿಯಾಸಿಟಿ ಇದ್ದೇ ಇರುತ್ತದೆ. ಅದರಲ್ಲಿಯೂ ತುದಿ ಸೀಟಲ್ಲಿಯೂ ಕೂರಲು ಬಿಡದಂಥಾ ಚಿತ್ರವೊಂದು ಬರುತ್ತಿದೆ ಅಂದರೆ ಸಹಜವಾಗಿಯೇ ಕುತೂಹಲ ನೂರ್ಮಡಿಸುತ್ತದೆ. ಅಂಥಾದ್ದೊಂದು ಕ್ರೇಜ್ ಹುಟ್ಟುಹಾಕುವಲ್ಲಿ ಒಂದು ಕಥೆ ಹೇಳ್ಲಾ ಟ್ರೈಲರ್ ಈಗಾಗಲೇ ಸಫಲವಾಗಿದೆ. ಯಾಕೆಂದರೆ, ಟ್ರೈಲರ್ ಅಷ್ಟೊಂದು ಅತ್ಯಾಕರ್ಷಕವಾಗಿ ಮೂಡಿ ಬಂದಿತ್ತು. ಇದೀಗ ಆ ಹವಾವನ್ನು ಈ ನಶೆಯ ಹಾಡು ಮುಂದುವರೆಸಿದೆ.

ಇದೊಂದು ಪಕ್ಕಾ ಮನೋರಂಜನಾತ್ಮಕ, ಹಾರರ್ ಸಿನಿಮಾ. ಹಾಗಂತ ಅದು ಅಷ್ಟಕ್ಕೇ ಸೀಮಿತವಾಗಿಲ್ಲ. ಇಲ್ಲಿ ಹೊಸ ಪ್ರಯೋಗ, ನವೀನ ತಂತ್ರಜ್ಞಾನಗಳೂ ಅಷ್ಟೇ ಮಹತ್ವದ ಪಾತ್ರ ವಹಿಸಿವೆ. ಒಂದಲ್ಲ ಎರಡಲ್ಲ ಐದು ಕಥೆಗಳನ್ನ ಒಂದು ಚಿತ್ರದ ಮೂಲಕ ಹೇಳಲಾಗಿದೆ. ಸತ್ಯ ಘಟನೆಯಾಧಾರಿತವಾದ ಈ ಐದೂ ಕಥೆಗಳು ಕ್ಲೈಮ್ಯಾಕ್ಸ್ ಹೊತ್ತಿಗೆ ಕನೆಕ್ಟ್ ಆಗುತ್ತವಂತೆ. ಈ ಐದೂ ಕಥೆಗಳೂ ಕೂಡಾ ಬೇರೆ ಬೇರೆ ಥರದವುಗಳು. ಸೈನ್ಸ್ ಬೇಸ್ಡ್ ಕಥೆಯೂ ಇದೆ. ಮೂಢನಂಬಿಕೆಗಳ ಸುತ್ತ ಗಿರಕಿ ಹೊಡೆಯೋ ಕಥೆಗಳೂ ಇಲ್ಲಿವೆಯಂತೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *