ನಡುರಸ್ತೆಯಲ್ಲಿ ಕಾರಿನಲ್ಲಿದ್ದ ಚಾಲಕನನ್ನು ಹೊರಗೆಳೆದು ಬಿಜೆಪಿ ಶಾಸಕನ ಪುತ್ರನಿಂದ ಹಲ್ಲೆ! -ವಿಡಿಯೋ ವೈರಲ್

Public TV
1 Min Read

ಬನ್ಸ್ವಾರ: ರಾಜಸ್ಥಾನದ ಬಿಜೆಪಿ ಶಾಸಕರ ಪುತ್ರನೊಬ್ಬ ನಡು ರಸ್ತೆಯಲ್ಲಿ ಕಾರಿನಿಂದ ಹೊರಗೆಳೆದು ಚಾಲಕನಿಗೆ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬನ್ಸ್ವಾರ ಕ್ಷೇತ್ರದ ಶಾಸಕ ಧನ್ ಸಿಂಗ್ ರಾವತ್ ಪುತ್ರ ರಾಜ ಎಂಬಾತ ಕಾರು ಚಾಲಕ ನೀರವ್ ಉಪಾಧ್ಯಾಯ ಎಂಬವರ ಮೇಲೆ ಹಲ್ಲೆ ನಡೆಸಿದ್ದು, ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯಗಳು ಸೆರೆಯಾಗಿದೆ. ಅಂದಹಾಗೇ ಶಾಸಕ ಪುತ್ರ ಕಾರು ಆಗಮಿಸುವ ವೇಳೆ ಹಲ್ಲೆಗೊಳಗಾದ ವ್ಯಕ್ತಿ ದಾರಿ ಬಿಡಲಿಲ್ಲ ಎಂಬ ಕಾರಣಕ್ಕೆ ಕೃತ್ಯ ನಡೆಸಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಜೂನ್ 1 ರಂದು ಬನ್ಸ್ವಾರದ ವಿದ್ಯಾತ್ ಕಲೋನಿ ಬಳಿ ಘಟನೆ ನಡೆಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಸದ್ಯ ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಲ್ಲೆಗೆ ಒಳಗಾದ ನೀರವ್ ಉಪಾಧ್ಯಾಯ, ಜೂನ್ 1 ರಂದು ಘಟನೆ ನಡೆದಿದ್ದು, ನಾನು ಏಕಮುಖ ಸಂಚಾರದ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದೆ. ಅಲ್ಲಿ ಬಂದಂತಹ ಇನ್ನೊಂದು ಕಾರಿಗೆ ಮುಂದೆ ಹೋಗಲೂ ಆಗಿಲ್ಲ. ಈ ವಿಚಾರವಾಗಿ ಕೆಲವರೊಂದಿಗೆ ವಾದ ನಡೆದಿದೆ. ಈ ವೇಳೆ ಸ್ಥಳದಲ್ಲಿ ಅವರು ಏಳು ಎಂಟು ಜನರಿದ್ದ ಕಾರಣ ನಾನು ಅಸಹಾಯಕನಾಗಿದ್ದೆ. ಆದರೆ ಈ ಕುರಿತು ಯಾವುದೇ ದೂರು ನೀಡಲು ಇಚ್ಛಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಸಿಸಿಟಿವಿ ವಿಡಿಯೋನ ಪ್ರಕಾರ ಸ್ಕಾರ್ಪಿಯೋ ಕಾರಿನಲ್ಲಿ ಬಂದಂತಹ ಶಾಸಕರ ಪುತ್ರ ರಾಜ ಹಾಗೂ ಅವರ ಸ್ನೇಹಿತರು ಸ್ವಿಫ್ಟ್ ಕಾರೊಂದನ್ನು ಮುಂದೆ ಹೋಗದಂತೆ ನಡುರಸ್ತೆಯಲ್ಲಿ ತಡೆದು, ಕಾರಿನಲ್ಲಿದ್ದ ನೀರವ್ ಅವರನ್ನು ಹೊರಗೆಳೆದು ಹಲ್ಲೆ ನಡೆಸಿದ್ದಾರೆ.

ಸದ್ಯ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಪೊಲೀಸ್ ಠಾಣಾ ಎಸ್‍ಪಿ ಚಂದನ್ ಸಿಂಗ್, ಶಾಸಕರ ಪುತ್ರ ಅಥವಾ ಯಾವುದೇ ವ್ಯಕ್ತಿ ಹಲ್ಲೆ ನಡೆಸಿರುವ ಕುರಿತು ನಮಗೇ ಯಾವುದೇ ದೂರು ಬಂದಿಲ್ಲ. ಅದ್ದರಿಂದ ಘಟನೆ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *